ಚೀನಾ: ಶಾಲೆಯಲ್ಲಿ ಬೆಂಕಿ ದುರಂತದಲ್ಲಿ ಕನಿಷ್ಟ 13 ಮಂದಿ ಸಾವು
Update: 2024-01-20 15:55 GMT
ಬೀಜಿಂಗ್: ಚೀನಾದ ಹೆನಾನ್ ಪ್ರಾಂತದಲ್ಲಿರುವ ವಸತಿ ಶಾಲೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಟ 13 ಮಂದಿ ಮೃತಪಟ್ಟಿರುವುದಾಗಿ ಸರಕಾರಿ ಸ್ವಾಮ್ಯದ ಕ್ಸಿನ್‍ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ.
ಹೆನಾನ್ ಪ್ರಾಂತದ ಯಂಶಂಪು ಗ್ರಾಮದ ಯಿಂಗ್‍ಕೈ ಪ್ರಾಥಮಿಕ ವಸತಿ ಶಾಲೆಯಲ್ಲಿ ಶುಕ್ರವಾರ ರಾತ್ರಿ 11 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಪ್ರಾಥಮಿಕ ಶಾಲೆಯ ಬಳಿಯೇ ಶಿಶುವಿಹಾರವೂ ಇದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಶಿಶು ವಿಹಾರಕ್ಕೆ ಬೆಂಕಿ ಹರಡದಂತೆ ಕ್ರಮ ಕೈಗೊಂಡು ಬೆಂಕಿಯನ್ನು ನಿಯಂತ್ರಿಸಿದೆ. ದುರಂತದಲ್ಲಿ ಕನಿಷ್ಟ 13 ಮಂದಿ ಮೃತಪಟ್ಟಿದ್ದು ಮೃತರಲ್ಲಿ ಮಕ್ಕಳ ಸಂಖ್ಯೆಯ ಬಗ್ಗೆ ಮಾಹಿತಿಯಿಲ್ಲ. ಓರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯ ಮಾಲಕನನ್ನು ಬಂಧಿಸಲಾಗಿದ್ದು ಬೆಂಕಿ ದುರಂತದ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.