ಹಾಂಕಾಂಗ್ ಭಿನ್ನಮತೀಯರ ಜತೆ ಬ್ರಿಟನ್ ಸಚಿವರ ಭೇಟಿ: ಚೀನಾ ಆಕ್ಷೇಪ
ಬೀಜಿಂಗ್: ಪ್ರಜಾಪ್ರಭುತ್ವ ಪರ ಧ್ವನಿ ಎತ್ತಿ ಚೀನಾದ ಕೆಂಗಣ್ಣಿಗೆ ಗುರಿಯಾಗಿದ್ದ ಹಾಂಕಾಂಗ್‍ನ ಭಿನ್ನಮತೀಯರ ಜತೆ ಬ್ರಿಟನ್‍ನ ವಿದೇಶಾಂಗ ಸಚಿವರ ಭೇಟಿಗೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಹಾಂಕಾಂಗ್‍ನಲ್ಲಿ ಪ್ರಜಾಪ್ರಭುತ್ವ ಪರ ಪತ್ರಿಕೆ `ಆ್ಯಪಲ್ ಡೈಲಿ'ಯ ಸ್ಥಾಪಕ, ಬ್ರಿಟನ್ ಪ್ರಜೆ ಜಿಮ್ಮಿ ಲಾಯ್ `ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದ' ಆರೋಪದಲ್ಲಿ 2020ರಿಂದಲೂ ಹಾಂಕಾಂಗ್‍ನಲ್ಲಿ ಬಂಧನದಲ್ಲಿದ್ದಾರೆ. ಇವರ ಪುತ್ರ ಸೆಬಾಸ್ಟಿಯನ್ ಲಾ ಮಂಗಳವಾರ ಬ್ರಿಟನ್‍ನ ವಿದೇಶಾಂಗ ಸಚಿವ ಡೇವಿಡ್ ಕ್ಯಾಮರಾನ್‍ರನ್ನು ಭೇಟಿಯಾಗಿ ತಂದೆಯ ಯೋಗಕ್ಷೇಮದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದರು. `ಹಾಂಕಾಂಗ್‍ನಲ್ಲಿ ಚೀನಾ ಜಾರಿಗೊಳಿಸಿರುವ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಬ್ರಿಟನ್ ವಿರೋಧಿಸುತ್ತದೆ ಮತ್ತು ಜಿಮ್ಮಿ ಲಾಯ್ ಸೇರಿದಂತೆ ಹಾಂಕಾಂಗ್‍ನ ಜನತೆಯ ಪರ ಧ್ವನಿ ಎತ್ತುವುದನ್ನು ಮುಂದುವರಿಸಲಿದೆ' ಎಂದು ಬ್ರಿಟನ್ ವಿದೇಶಾಂಗ ಸಚಿವಾಲಯದ ವೆಬ್‍ಸೈಟ್‍ನಲ್ಲಿ ಹೇಳಿಕೆ ನೀಡಲಾಗಿದೆ.
ಈ ಬಗ್ಗೆ ಬುಧವಾರ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಾನೂನು ಮತ್ತು ವಾಸ್ತವವನ್ನು ಬ್ರಿಟನ್ ಗೌರವಿಸಬೇಕು ಮತ್ತು ಹಾಂಕಾಂಗ್ ವಿಷಯ ಹಾಗೂ ಚೀನಾದ ಆಂತರಿಕ ವ್ಯವಹಾರಗಳಲ್ಲಿನ ಹಸ್ತಕ್ಷೇಪವನ್ನು ನಿಲ್ಲಿಸಬೇಕು' ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್ ಪ್ರತಿಕ್ರಿಯಿಸಿದ್ದಾರೆ. ಜಿಮ್ಮಿ ಲಾಯ್ ಹಾಂಕಾಂಗ್‍ನಲ್ಲಿ 2019ರಲ್ಲಿ ಪ್ರಜಾಪ್ರಭುತ್ವಕ್ಕೆ ಆಗ್ರಹಿಸಿ ನಡೆದಿದ್ದ ಬೃಹತ್ ಪ್ರತಿಭಟನೆ ಸೇರಿದಂತೆ ಎಲ್ಲಾ ಅವ್ಯವಸ್ಥೆ, ಗೊಂದಲದ ಹಿಂದಿನ ಚಾಲನಾ ಶಕ್ತಿಯಾಗಿದ್ದಾರೆ. ಬ್ರಿಟನ್‍ನ ಅವಳಿ ಮಾನದಂಡ ಮತ್ತು ದುರುದ್ದೇಶಪೂರಿತ ಉದ್ದೇಶಗಳು ಸ್ಪಷ್ಟವಾಗಿ ಬಹಿರಂಗಗೊಂಡಿದೆ ಎಂದು ಮಾವೊ ನಿಂಗ್ ಪ್ರತಿಪಾದಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನದಲ್ಲಿರುವ ಜಿಮ್ಮಿಲಾಯ್ ಅಪರಾಧ ಸಾಬೀತಾದರೆ ಜೀವಾವಧಿ ಶಿಕ್ಷೆ ವಿಧಿಸಬಹುದು ಎಂದು ಮೂಲಗಳು ಹೇಳಿವೆ.