ಪಹಲ್ಗಾಮ್ ದಾಳಿ | ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ಚೀನಾ; ತ್ವರಿತ ತನಿಖೆಗೆ ಭಾರತಕ್ಕೆ ಆಗ್ರಹ

Photo credit: PTI
ಬೀಜಿಂಗ್: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಚೀನಾ ಬೆಂಬಲ ಸೂಚಿಸಿದೆ. ಈ ಕುರಿತು ತ್ವರಿತ ತನಿಖೆ ನಡೆಯಬೇಕು ಎಂದು ಭಾರತವನ್ನು ಆಗ್ರಹಿಸಿದೆ.
ಪಾಕಿಸ್ತಾನದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದರ್ ಅವರೊಂದಿಗೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ರವಿವಾರ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಹಲ್ಗಾಮ್ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಉಂಟಾಗಿರುವ ಬಿಕ್ಕಟ್ಟಿನ ಕುರಿತು ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಕೇಂದ್ರ ಸಮಿತಿ ಪಾಲಿಟಿಕಲ್ ಬ್ಯೂರೋದ ಸದಸ್ಯರೂ ಆಗಿರುವ ವಾಂಗ್ ಅವರಿಗೆ ಇಶಾಕ್ ದರ್ ವಿವರಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಾರ್ವಭೌಮತ್ವ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ಚೀನಾ ಬೆಂಬಲ ವ್ಯಕ್ತಪಡಿಸಿದೆ.
ಈ ಎಲ್ಲ ಬೆಳವಣಿಗೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಭಯೋತ್ಪಾದನೆ ಎದುರಿಸುವುದು ಇಡೀ ಜಗತ್ತಿನ ಸಮಾನ ಜವಾಬ್ದಾರಿಯಾಗಿದೆ. ಪಾಕ್‌ನ ಈ ಪ್ರಯತ್ನಗಳಿಗೆ ಬೀಜಿಂಗ್‌ನ ನಿರಂತರ ಬೆಂಬಲವನ್ನು ವಾಂಗ್ ಪುನರುಚ್ಚರಿಸಿದ್ದಾರೆ.