ಅಮೆರಿಕಕ್ಕೆ ಚೀನಾ ತಿರುಗೇಟು: ಎಪ್ರಿಲ್ 10ರಿಂದ ಶೇ. 84ರಷ್ಟು ಸುಂಕ ಹೇರಿಕೆ

PC : indianexpress.com
ಬೀಜಿಂಗ್: ಚೀನಾದ ಪ್ರತಿ ಸುಂಕ ನೀತಿಗೆ ತೀಕ್ಷ್ಣ ತಿರುಗೇಟು ನೀಡಿರುವ ಚೀನಾ, ಎಪ್ರಿಲ್ 10ರಿಂದ ಶೇ. 84ರಷ್ಟು ಅತ್ಯಧಿಕ ಸುಂಕ ಏರಿಕೆ ಮಾಡಿದೆ ಎಂದು ಬುಧವಾರ ಚೀನಾದ ಹಣಕಾಸು ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಅಮೆರಿಕದ ವೈವಿಧ್ಯಮಯ ಸರಕುಗಳ ಮೇಲೆ ಪ್ರಕಟಿಸಿದ್ದ ಶೇ. 34ಷ್ಟು ಸುಂಕ ವಿಧಿಸಲಾಗುತ್ತಿತ್ತು.
ಬುಧವಾರದಿಂದ ಅನ್ವಯವಾಗುವಂತೆ ಚೀನಾದ ಸರಕುಗಳ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಭಾರಿ ಪ್ರಮಾಣದ ಶೇ. 104ರಷ್ಟು ಸುಂಕಕ್ಕೆ ನೇರ ಪ್ರತೀಕಾರವಾಗಿ ಚೀನಾ ಈ ನಿಲುವು ತೆಗೆದುಕೊಂಡಿದೆ.
ಅಮೆರಿಕ ಕಾಲಮಾನವಾದ ಬುಧವಾರ ಮಧ್ಯರಾತ್ರಿಯಿಂದ 60 ದೇಶಗಳನ್ನು ಗುರಿಯಾಗಿಸಿಕೊಂಡು ಅಧಿಕೃತವಾಗಿ ಜಾರಿಗೆ ಬಂದಿರುವ ಅಮೆರಿಕದ ಭಾರಿ ಪ್ರಮಾಣದ ಸುಂಕ ಏರಿಕೆ ನೀತಿಯ ವಿರುದ್ಧ ದೃಢ ಹಾಗೂ ಅನಿವಾರ್ಯ ಪ್ರತಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಚೀನಾ ಪ್ರತಿಜ್ಞೆ ಮಾಡಿದೆ.
ದೈನಂದಿನ ಮಾಧ್ಯಮ ಸಂಕ್ಷಿಪ್ತ ವಿವರಣೆ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್, ಅಮೆರಿಕದ ನಡೆಯನ್ನು ಕಟುವಾದ ಮಾತುಗಳಲ್ಲಿ ಖಂಡಿಸಿದರು. “ನಮ್ಮ ನ್ಯಾಯಯುತ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ರಕ್ಷಿಸಲು ದೃಢ ನಿಶ್ಚಯದ ಕ್ರಮಗಳನ್ನು ಕೈಗೊಳ್ಳುವುದನ್ನು ಚೀನಾ ಮುಂದುವರಿಸಲಿದೆ” ಎಂದು ಹೇಳಿದ್ದಾರೆ. “ಚೀನಾದ ಸಾರ್ವಭೌಮತೆ, ಭದ್ರತೆ ಹಾಗೂ ಅಭಿವೃದ್ಧಿ ಹಿತಾಸಕ್ತಿಗಳಿಗೆ ಧಕ್ಕೆ ತರುವ ಪ್ರಯತ್ನವನ್ನು ನಾವು ಸಹಿಸುವುದಿಲ್ಲ” ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
“ಅಮೆರಿಕವು ಸುಂಕಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಅದನ್ನು ಬಲವಂತದ ಸಾಧನವನ್ನಾಗಿ ಬಳಸುತ್ತಿದೆ. ಇದು ಬೆದರಿಕೆ ಹಾಗೂ ಆಧಿಪತ್ಯದ ಕ್ರಮವಾಗಿದ್ದು, ಇದನ್ನು ಚೀನಾ ದೃಢವಾಗಿ ವಿರೋಧಿಸುತ್ತದೆ” ಎಂದೂ ಲಿನ್ ಆರೋಪಿಸಿದ್ದಾರೆ.
ಅಮೆರಿಕ ಹಾಗೂ ಚೀನಾ ನಡುವೆ ಉಲ್ಬಣಿಸುತ್ತಿರುವ ವ್ಯಾಪಾರ ಸಮರದಿಂದಾಗಿ, ವಿಶ್ವದ ಎರಡು ದೊಡ್ಡ ಆರ್ಥಿಕ ಶಕ್ತಿಗಳ ನಡುವಿನ ಸಂಘರ್ಷ ಮತ್ತಷ್ಟು ಸಂಕೀರ್ಣಗೊಳ್ಳುತ್ತಾ ಸಾಗಿದೆ.