ತೈವಾನ್ ಪ್ರತ್ಯೇಕತಾವಾದಿಗಳನ್ನು ಶಿಕ್ಷಿಸಲು ಚೀನಾದಿಂದ ಹೊಸ ಮಾರ್ಗಸೂಚಿ
ಬೀಜಿಂಗ್: ತೈವಾನ್ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ `ಪ್ರತ್ಯೇಕತಾವಾದಿಗಳಿಗೆ' ಮರಣದಂಡನೆ ವಿಧಿಸುವ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸುವುದಾಗಿ ಚೀನಾ ಎಚ್ಚರಿಕೆ ನೀಡಿದೆ.
ತೈವಾನ್‍ನ ಅಧ್ಯಕ್ಷರಾಗಿ ಲಾಯ್ ಚಿಂಗ್‍ಟೆ ಅಧಿಕಾರ ಸ್ವೀಕರಿಸಿದಂದಿನಿಂದ ತೈವಾನ್ ವಿರುದ್ಧದ ಆಕ್ರಮಣಕಾರಿ ಉಪಕ್ರಮಗಳನ್ನು ಚೀನಾ ತೀವ್ರಗೊಳಿಸಿದ್ದು ಲಾಯ್ ಓರ್ವ ಪ್ರತ್ಯೇಕತಾವಾದಿ ಎಂದು ಟೀಕಿಸಿದೆ. ಚೀನಾದೊಂದಿಗೆ ತೈವಾನ್ ಮರುಏಕೀಕರಣವನ್ನು ಬೆಂಬಲಿಸದವರು ತೈವಾನ್ ಸ್ವಾತಂತ್ರ್ಯವನ್ನು ಬೆಂಬಲಿಸುವ ಪ್ರತ್ಯೇಕತಾವಾದಿಗಳೆಂದು ಪರಿಗಣಿಸಿ ಕಠಿಣ ಶಿಕ್ಷೆ ವಿಧಿಸಲಾಗುವುದು. ಔಪಚಾರಿಕ ಸ್ವಾತಂತ್ರ್ಯವನ್ನು ಘೋಷಿಸುವ ತೈವಾನ್‍ನ ಕ್ರಮವು ಆ ದ್ವೀಪದ ಮೇಲೆ ದಾಳಿ ನಡೆಸಲು ಸಕಾರಣವಾಗಲಿದೆ ಎಂದು ಎಂದು ಚೀನಾ ಶುಕ್ರವಾರ ಎಚ್ಚರಿಕೆ ನೀಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ತೈವಾನ್ ಅಧ್ಯಕ್ಷ ಲಾಯ್ ಚಿಂಗ್‍ಟೆ `ರಿಪಬ್ಲಿಕ್ ಆಫ್ ಚೀನಾ(ತೈವಾನ್)ನ ಅಸ್ತಿತ್ವವನ್ನು ಪರಿಗಣಿಸಲು ಮತ್ತು ತೈವಾನ್‍ನ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಕಾನೂನುಬದ್ಧ ಸರಕಾರದ ಜತೆ ಮಾತುಕತೆ ನಡೆಸುವಂತೆ' ಚೀನಾಕ್ಕೆ ಕರೆ ನೀಡುವುದಾಗಿ ಹೇಳಿದ್ದಾರೆ.
ಪ್ರಜಾಪ್ರಭುತ್ವ ಅಪರಾಧವಲ್ಲ. ನಿರಂಕುಶಾಧಿಕಾರ ನಿಜವಾಗಿಯೂ ದುಷ್ಟತನವಾಗಿದೆ. ತೈವಾನ್ ಜನತೆಯ ಮೇಲೆ ನಿರ್ಬಂಧ ಜಾರಿಗೊಳಿಸಲು ಚೀನಾಕ್ಕೆ ಯಾವುದೇ ಹಕ್ಕು ಮತ್ತು ಅಧಿಕಾರವಿಲ್ಲ. ತೈವಾನ್‍ನ ಭವಿಷ್ಯವನ್ನು ನಿರ್ಧರಿಸುವವರು ಇಲ್ಲಿನ ಜನತೆ ಎಂದ ಅವರು, ಚೀನಾದ ಸಾರ್ವಭೌಮತ್ವ ಪ್ರತಿಪಾದನೆಯನ್ನು ತಿರಸ್ಕರಿಸುವುದಾಗಿ ಹೇಳಿದ್ದಾರೆ.