ವಿಶ್ವದ ಮೊಟ್ಟಮೊದಲ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಗೆ ಚೀನಾ ಚಾಲನೆ

PC: x.com/GlobalEyeInfo
ಬೀಜಿಂಗ್: ಇಂಟರ್ ನೆಟ್ ಮೂಲ ಸೌಕರ್ಯದಲ್ಲಿ ಹೆಗ್ಗುರುತು ಮೂಡಿಸಿರುವ ಚೀನಾ ಕಳೆದ ರವಿವಾರ ವಿಶ್ವದ ಮೊಟ್ಟಮೊದಲ 10ಜಿ ಬ್ರಾಡ್ ಬ್ಯಾಂಡ್ ನೆಟ್ ವರ್ಕ್ ಆರಂಭಿಸಿದೆ. ಹೆಬೀ ಪ್ರಾಂತ್ಯದ ಸುನಾನ್ ನಗರದಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದೆ. ಹ್ಯುವೀ ಮತ್ತು ಚೀನಾ ಯುನಿಕಾಂ ಸಹಯೋಗದಲ್ಲಿ 9834 ಎಂಬಿಪಿಎಸ್ ಡೌನ್ ಲೋಡ್ ವೇಗ ನೀಡುವ ಗುರಿ ಹೊಂದಿದ ಮತ್ತು 1008 ಎಂಬಿಪಿಎಸ್ ಅಪ್ ಲೋಡ್ ಸ್ಪೀಡ್ ಸಾಧಿಸುವ ಸೇವೆಯನ್ನು ಆರಂಭಿಸಿದೆ. ಇದರಿಂದಾಗಿ ಕಾಯುವಿಕೆ ಅವಧಿ ಕೇವಲ 3 ಮಿಲಿ ಸೆಕೆಂಡ್ ಗೆ ಇಳಿಯಲಿದೆ.
50 ಜಿ ಪ್ಯಾಸಿವ್ ಆಪ್ಟಿಕಲ್ ನೆಟ್ವರ್ಕ್ (ಪಿಎನ್ ಓ) ತಂತ್ರಜ್ಞಾನವು 10ಜಿ ನೆಟ್ ವರ್ಕ್ಗೆ ಆಧಾರವಾಗಲಿದ್ದು, ಇದು ಹಾಲಿ ಇರುವ ಫೈಬರ್ ಆಪ್ಟಿಕ್ ಮೂಲಸೌಕರ್ಯಕ್ಕೆ ಹೋಲಿಸಿದರೆ ಡಾಟಾ ವರ್ಗಾವಣೆಯನ್ನು ಸುಧಾರಿಸಲಿದೆ. ಅಧಿಕ ಬ್ಯಾಂಡ್ ವಿಡ್ತ್ ಈ ತಂತ್ರಜ್ಞಾನದಲ್ಲಿ ಬಳಕೆಯಾಗಲಿದ್ದು, ಕ್ಲೌಡ್ ಕಂಪ್ಯೂಟಿಂಗ್, ವರ್ಚುವಲ್ ಮತ್ತು ಅಗ್ಯುಮೆಂಟೆಡ್ ರಿಯಾಲಿಟಿ, 8ಕೆ ವಿಡಿಯೊ ಸ್ಟ್ರೀಮಿಂಗ್ ಮತ್ತು ಸ್ಮಾರ್ಟ್ ಗೃಹ ಸಾಧನಗಳ ಸಮನ್ವಯತೆನ್ನು ಒಳಗೊಂಡಿದೆ.
ಉದಾಹರಣೆಗೆ ಅಂದಾಜು 20 ಜಿಬಿ ಗಾತ್ರದ 4ಕೆ ಉದ್ದದ ಚಲನಚಿತ್ರವೊಂದನ್ನು 1ಜಿಬಿಪಿಎಸ್ ಸಂಪರ್ಕದಲ್ಲಿ 7-10 ನಿಮಿಷಗಳಲ್ಲಿ ಡೌನ್ ಲೋಡ್ ಮಾಡಬಹುದಾಗಿದೆ. ಇದೀಗ ಹೊಸ 10ಜಿ ಬ್ರಾಡ್ ಬ್ಯಾಂಡ್ ನೆಟ್ ವರ್ಕ್ ನಲ್ಲಿ ಇದೇ 4ಕೆ ಚಲನಚಿತ್ರವನ್ನು ಕೇವಲ 20 ಸೆಕೆಂಡ್ ಗಳಲ್ಲಿ ಡೌನ್ ಲೋಡ್ ಮಾಡಬಹುದಾಗಿದೆ.
ಚೀನಾ ಜಾಗತಿಕ ಬ್ರಾಡ್ ಬ್ಯಾಂಡ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದು, ಹಾಲಿ ಯುಎಇ ಮತ್ತು ಕತಾರ್ ನಂತಹ ದೇಶಗಳಲ್ಲಿರುವ ವಾಣಿಜ್ಯ ಬ್ರಾಡ್ ಬ್ಯಾಂಡ್ ನ ವೇಗವನ್ನು ಮೀರಲಿದೆ. 10 ಜಿ ಬ್ರಾಡ್ ಬ್ಯಾಂಡ್ ಸೌಲಭ್ಯವು ವೇಗದ ಹಾಗೂ ಹೆಚ್ಚು ವಿಶ್ವಾಸಾರ್ಹ ದತ್ತಾಂಶಗಳ ವರ್ಗಾವಣೆಗೆ ಅನುಕೂಲವಾಗಲಿದ್ದು, ಆರೋಗ್ಯಸೇವೆ, ಶಿಕ್ಷಣ, ಕೃಷಿ ಮತ್ತಿತರ ಕ್ಷೇತ್ರಗಳಲ್ಲಿ ಸುಧಾರಣೆಗಳಿಗೆ ಕಾರಣವಾಗಲಿದೆ.