ತೈವಾನ್ ಗೆ ಶಸ್ತ್ರಾಸ್ತ್ರ ಮಾರಾಟ | ಅಮೆರಿಕದ 3 ಸಂಸ್ಥೆಗಳ ವಿರುದ್ಧ ಚೀನಾ ನಿರ್ಬಂಧ
ಬೀಜಿಂಗ್: ತೈವಾನ್ ಗೆ ಶಸ್ತ್ರಾಸ್ತ್ರ ಮಾರಾಟ ಮಾಡಿರುವ ಅಮೆರಿಕದ ಮೂರು ಸಂಸ್ಥೆಗಳ ವಿರುದ್ಧ ನಿರ್ಬಂಧ ವಿಧಿಸಿರುವುದಾಗಿ ಚೀನಾ ಸೋಮವಾರ ಘೋಷಿಸಿದೆ.
ಸ್ವಯಂ ಆಡಳಿತ ವ್ಯವಸ್ಥೆಯಿರುವ ತೈವಾನ್ ನ ನೂತನ ಅಧ್ಯಕ್ಷರಾಗಿ ಲಾಯ್ ಚಿಂಗ್ಟೆ ಸೋಮವಾರ ಪ್ರಮಾಣವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲೇ ಚೀನಾ ಈ ಕ್ರಮ ಕೈಗೊಂಡಿದೆ. ಅಮೆರಿಕದ `ಜನರಲ್ ಅಟೊಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್, ಜನರಲ್ ಡೈನಾಮಿಕ್ಸ್ ಲ್ಯಾಂಡ್ ಸಿಸ್ಟಮ್ಸ್ ಮತ್ತು ಬೋಯಿಂಗ್ ಡಿಫೆನ್ಸ್, ಸ್ಪೇಸ್ ಆ್ಯಂಡ್ ಸೆಕ್ಯುರಿಟಿ' ಸಂಸ್ಥೆಗಳು `ವಿಶ್ವಾಸಕ್ಕೆ ಅರ್ಹವಲ್ಲದ ಸಂಸ್ಥೆ'ಗಳಾಗಿದ್ದು ಚೀನಾಕ್ಕೆ ಸಂಬಂಧಿಸಿದ ಆಮದು-ರಫ್ತು ಚಟುವಟಿಕೆಗಳಿಂದ ನಿಷೇಧಿಸಲಾಗಿದೆ ಮತ್ತು ಚೀನಾದಲ್ಲಿ ಹೊಸ ಹೂಡಿಕೆ ಮಾಡದಂತೆ ನಿರ್ಬಂಧಿಸಲಾಗಿದೆ.
ಸಂಸ್ಥೆಯ ಹಿರಿಯ ಅಧಿಕಾರಿಗಳು ಚೀನಾ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದು ಅವರ ಕೆಲಸದ ಪರ್ಮಿಟ್ ಅನ್ನು ರದ್ದುಗೊಳಿಸಲಾಗುವುದು ಎಂದು ಚೀನಾದ ವಾಣಿಜ್ಯ ಇಲಾಖೆಯನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ.