ಬೀಜಿಂಗ್-ಫಿಲಿಪ್ಪೀನ್ಸ್ ನಡುವಿನ ಸಮಸ್ಯೆಯಲ್ಲಿ ಮಧ್ಯಪ್ರವೇಶಕ್ಕೆ ಅಮೆರಿಕಕ್ಕೆ ಹಕ್ಕಿಲ್ಲ: ಚೀನಾ
ಬೀಜಿಂಗ್ : ಚೀನಾ ಮತ್ತು ಫಿಲಿಪ್ಪೀನ್ಸ್ ನಡುವಿನ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸಲು ಅಮೆರಿಕಕ್ಕೆ ಯಾವುದೇ ಹಕ್ಕು ಇಲ್ಲ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರರು ಗುರುವಾರ ಹೇಳಿದ್ದಾರೆ.
ದಕ್ಷಿಣ ಚೀನಾ ಸಮುದ್ರ ವಿವಾದ ಅಮೆರಿಕಕ್ಕೆ ಸಂಬಂಧಿಸಿದಲ್ಲ. ಇದು ಚೀನಾ ಮತ್ತು ಫಿಲಿಪ್ಪೀನ್ಸ್ ನಡುವಿನ ಬಿಕ್ಕಟ್ಟು ಮತ್ತು ನಾವೇ ಸರಿಪಡಿಸಿಕೊಳ್ಳುತ್ತೇವೆ, ಅಮೆರಿಕದ ಮಧ್ಯಪ್ರವೇಶದ ಅಗತ್ಯವಿಲ್ಲ ಮತ್ತು ಅವರಿಗೆ ಆ ಹಕ್ಕೂ ಇಲ್ಲ. ಫಿಲಿಪ್ಪೀನ್ಸ್ ನ ರಕ್ಷಣೆಗೆ ಬದ್ಧ ಎಂಬ ಅಮೆರಿಕದ ಆಶ್ವಾಸನೆಯು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಸಾರ್ವಭೌಮತ್ವ ಮತ್ತು ಕಡಲ ಹಿತಾಸಕ್ತಿಗಳನ್ನು ನೋಯಿಸಬಾರದು. ಜತೆಗೆ, ಇದು ಫಿಲಿಪ್ಪೀನ್ಸ್‍ನ ಅಕ್ರಮ ಹಕ್ಕುಗಳನ್ನು ಸಕ್ರಿಯಗೊಳಿಸಬಾರದು ಮತ್ತು ಪ್ರೋತ್ಸಾಹಿಸಬಾರದು' ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಬುಧವಾರ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್ `ಫಿಲಿಪ್ಪೀನ್ಸ್ ನ ರಕ್ಷಣೆಗೆ ಅಮೆರಿಕದ ಬದ್ಧತೆಯು ಉಕ್ಕಿನಷ್ಟು ಸದೃಢವಾಗಿದೆ. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾ ಕಾನೂನು ಬಾಹಿರವಾಗಿ ಮತ್ತು ಅಪಾಯಕಾರಿಯಾಗಿ ವರ್ತಿಸುತ್ತಿದೆ. ಫಿಲಿಪ್ಪೀನ್ಸ್ ನ ಯುದ್ಧವಿಮಾನ, ಹಡಗುಗಳು ಅಥವಾ ಸಶಸ್ತ್ರ ಪಡೆಗಳ ಮೇಲೆ ಯಾವುದೇ ದಾಳಿ ನಡೆದರೂ ಫಿಲಿಪ್ಪೀನ್ಸ್ ಜತೆಗಿನ ನಮ್ಮ ಪರಸ್ಪರ ರಕ್ಷಣಾ ಒಪ್ಪಂದವನ್ನು ಅನುಷ್ಠಾನಗೊಳಿಸಬಹುದು' ಎಂದು ಹೇಳಿದ್ದರು.