ಚೀನಾ: ಸಾಮಾಜಿಕ ಮಾಧ್ಯಮದ ವಿರುದ್ಧ ಕಠಿಣ ಕ್ರಮ, 6,300 ಜನರಿಗೆ ಶಿಕ್ಷೆ

Update: 2023-12-24 17:59 GMT

Photo: Canva

ಬೀಜಿಂಗ್: ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳನ್ನು ಹರಡುವುದರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಚೀನಾದ ಪೊಲೀಸರು ಎಪ್ರಿಲ್ ಬಳಿಕ 34,000 ಆನ್ಲೈನ್ ಖಾತೆಗಳನ್ನು ಬಂದ್ ಮಾಡಿದ್ದು 6,300ಕ್ಕೂ ಅಧಿಕ ಜನರಿಗೆ ಶಿಕ್ಷೆ ವಿಧಿಸಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ.

ಚೀನಾದಲ್ಲಿ ಇಂಟರ್ನೆಟ್ ವ್ಯವಸ್ಥೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಬಿಗಿನಿಯಂತ್ರಣದಲ್ಲಿದ್ದು ಸಾಮಾಜಿಕ ಸ್ಥಿರತೆ ರಕ್ಷಣೆಯ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದ ವ್ಯಾಪಕ ಸೆನ್ಸಾರ್ಶಿಪ್ ಅನ್ನು ನಕರಾತ್ಮಕ ವರದಿ ಅಥವಾ ಸರಕಾರವನ್ನು ಟೀಕಿಸುವ ಸುದ್ಧಿಗಳನ್ನು ನಿಗ್ರಹಿಸಲು ಹೆಚ್ಚಾಗಿ ಬಳಸಲಾಗುತ್ತದೆ. `ಪೊಲೀಸ್, ಸಾಂಕ್ರಾಮಿಕ ರೋಗಗಳು, ಅಪಾಯಗಳು ಮತ್ತು ವಿಪತ್ತುಗಳ ಬಗ್ಗೆ ಸುಳ್ಳು ಮಾಹಿತಿಗಳನ್ನು ಸೃಷ್ಟಿಸುವಂತಹ ಕ್ರಿಮಿನಲ್ ಕೃತ್ಯಗಳ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಇದುವರೆಗೆ ಸಾರ್ವಜನಿಕ ಭದ್ರತಾ ಸಂಸ್ಥೆಗಳು ದೇಶದಾದ್ಯಂತ 4,800ಕ್ಕೂ ಹೆಚ್ಚು ಆನ್ಲೈನ್ ವದಂತಿ ಪ್ರಕರಣಗಳನ್ನು ತನಿಖೆ ನಡೆಸಿದ್ದು ವದಂತಿ ಹರಡುತ್ತಿದ್ದ 6,300ಕ್ಕೂ ಅಧಿಕ ಜನರ ವಿರುದ್ಧ ಕ್ರಮಗಳನ್ನು ಕೈಗೊಂಡಿದ್ದಾರೆ. ಜತೆಗೆ 34,000 ಅಕ್ರಮ ಖಾತೆಗಳನ್ನು ಮುಚ್ಚಿದ್ದಾರೆ' ಎಂದು ಸಿಸಿಟಿವಿ ವರದಿ ಮಾಡಿದೆ.

ಎಪ್ರಿಲ್ ನಲ್ಲಿ `ಕ್ಲೀನ್ನೆಟ್' ಅಭಿಯಾನ ಆರಂಭವಾದಂದಿನಿಂದ ಪೊಲೀಸರು 27,000 ಮಾಹಿತಿಗಳನ್ನು ಅಳಿಸಿದ್ದಾರೆ ಮತ್ತು ಸೈಬರ್ ಕಿರುಕುಳದ ಕಾರಣಕ್ಕೆ 500ಕ್ಕೂ ಅಧಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ. 2024ರ ವರ್ಷವನ್ನು `ಆನ್ಲೈನ್ ವದಂತಿಗಳ ವಿರುದ್ಧ ವಿಶೇಷ ಕ್ರಮದ ವರ್ಷ'ವೆಂದು ಪೊಲೀಸರು ಗೊತ್ತುಪಡಿಸಿರುವುದಾಗಿ ವರದಿ ಹೇಳಿದೆ.


Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News