ಅಮೆರಿಕ ಸುಂಕ ತಕ್ಷಣ ರದ್ದುಗೊಳಿಸಲು ಚೀನಾ ಆಗ್ರಹ: ಪ್ರತೀಕಾರದ ಎಚ್ಚರಿಕೆ
Photo Credit | PTI
ಬೀಜಿಂಗ್, ಎ.3: ಅಮೆರಿಕ ವಿಧಿಸಿರುವ ಹೆಚ್ಚುವರಿ ಸುಂಕವನ್ನು ತಕ್ಷಣ ರದ್ದುಗೊಳಿಸದಿದ್ದರೆ ಸೂಕ್ತ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ವಿಶ್ವದ 2ನೇ ಬೃಹತ್ ಆರ್ಥಿಕತೆಯಾದ ಚೀನಾ ಗುರುವಾರ ಎಚ್ಚರಿಕೆ ನೀಡಿದೆ.
ಈ ವರ್ಷದ ಆರಂಭದಲ್ಲಿ ಚೀನಾದ ಆಮದಿನ ಮೇಲೆ 20% ಸುಂಕ ಘೋಷಿಸಿದ್ದ ಟ್ರಂಪ್, ಬುಧವಾರ ಹೆಚ್ಚುವರಿ 34% ಸುಂಕ ಜಾರಿಗೊಳಿಸಿದ್ದು ಚೀನಾದ ಆಮದಿನ ಮೇಲೆ ಇದೀಗ 54% ತೆರಿಗೆ ಜಾರಿಯಾಗಲಿದೆ. ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಂದರ್ಭ ಚೀನಾದ ಆಮದಿನ ಮೇಲೆ 60% ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದರು.
ಕಳೆದ ಹಲವು ವರ್ಷಗಳಿಂದ ಬಹುಪಕ್ಷೀಯ ವ್ಯಾಪಾರ ಮಾತುಕತೆಯಲ್ಲಿ ತಲುಪಿದ ಹಿತಾಸಕ್ತಿಗಳ ಸಮತೋಲನವನ್ನು ಅಮೆರಿಕದ ನಡೆಯು ಕಡೆಗಣಿಸುತ್ತದೆ. ತನ್ನ ಹಿತಾಸಕ್ತಿಯ ರಕ್ಷಣೆಗಾಗಿ ಚೀನಾ ಪ್ರತಿಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಚೀನಾದ ವಾಣಿಜ್ಯ ಇಲಾಖೆಯ ಹೇಳಿಕೆ ತಿಳಿಸಿದೆ. ಟ್ರಂಪ್ ಅವರ ನಡೆಯು ಜಾಗತಿಕ ವ್ಯಾಪಾರಕ್ಕೆ ಮಾರಣಾಂತಿಕ ಹೊಡೆತ ನೀಡಲಿದೆ.
ಇದರ ಪರಿಣಾಮವು ವಿಶ್ವದಾದ್ಯಂತದ ಕೋಟ್ಯಾಂತರ ಜನರಿಗೆ ಭೀಕರವಾಗಿರುತ್ತದೆ. ಹೆಚ್ಚುವರಿ ಸುಂಕ ರದ್ದತಿಯ ಕುರಿತು 27 ಸದಸ್ಯ ರಾಷ್ಟ್ರಗಳ ಯುರೋಪಿಯನ್ ಯೂನಿಯನ್ ನಿಯೋಗ ಅಮೆರಿಕದ ಜತೆ ನಡೆಸಲಿರುವ ಮಾತುಕತೆ ವಿಫಲವಾದರೆ ಪ್ರತೀಕಾರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಯುರೋಪಿಯನ್ ಯೂನಿಯನ್ ಮುಖ್ಯಸ್ಥೆ ಉರ್ಸುಲಾ ವಾನ್ಡೆರ್ ಲೆಯೆನ್ ಹೇಳಿದ್ದಾರೆ. ಟ್ರಂಪ್ ಆಡಳಿತದ ಸುಂಕಗಳಿಗೆ ಯಾವುದೇ ತಾರ್ಕಿಕ ಆಧಾರಗಳಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬಾನಿಸ್ ಪ್ರತಿಕ್ರಿಯಿಸಿದ್ದಾರೆ.
ಯಾವುದೇ ಪ್ರತೀಕಾರ ಕ್ರಮಗಳು ಪರಿಸ್ಥಿತಿ ಉಲ್ಬಣಗೊಳ್ಳಲು ಮಾತ್ರ ಕಾರಣವಾಗುತ್ತದೆ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು.