ಸತತ 2ನೇ ವರ್ಷ ಚೀನಾದ ಜನಸಂಖ್ಯೆ ಇಳಿಕೆ: ವರದಿ

Update: 2024-01-17 17:50 GMT

ಸಾಂದರ್ಭಿಕ ಚಿತ್ರ | PTI 

ಬೀಜಿಂಗ್: ಸತತ ಎರಡನೇ ವರ್ಷವೂ ಚೀನಾದ ಜನಸಂಖ್ಯೆಯ ಬೆಳವಣಿಗೆಯಲ್ಲಿ ಇಳಿಕೆಯ ಪ್ರವೃತ್ತಿ ದಾಖಲಾಗಿದ್ದು ಕಾರ್ಮಿಕ ಬಲ(ಮಾನವಶಕ್ತಿ)ವೂ ಕುಸಿದಿದೆ. ಜತೆಗೆ ಹಿರಿಯ ನಾಗರಿಕರ ಪ್ರಮಾಣ ಹೆಚ್ಚಿದೆ ಎಂದು ಚೀನಾದ `ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್'ನ ವರದಿ ಹೇಳಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ 2023ರಲ್ಲಿ ದೇಶದ ಜನಸಂಖ್ಯೆಯು ಸುಮಾರು 2.08 ದಶಲಕ್ಷದಷ್ಟು ಕಡಿಮೆಯಾಗಿದ್ದು ಚೀನಾ ಪ್ರಸ್ತುತ 1.409 ಶತಕೋಟಿ ಜನರನ್ನು ಹೊಂದುವ ಮೂಲಕ ವಿಶ್ವದಲ್ಲಿ ಅತೀಹೆಚ್ಚು ಜನಸಂಖ್ಯೆಯ ದೇಶಗಳಲ್ಲಿ 2ನೇ ಸ್ಥಾನದಲ್ಲಿದೆ. ಕಳೆದ ವರ್ಷ ಚೀನಾವನ್ನು ಹಿಂದಿಕ್ಕಿದ ಭಾರತ ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆಯ ದೇಶವಾಗಿ ಗುರುತಿಸಿಕೊಂಡಿದೆ.

2022ರಲ್ಲಿ ಚೀನಾದ ಜನಸಂಖ್ಯೆಯ ಪ್ರಮಾಣ ಇಳಿಮುಖಗೊಳ್ಳಲು ಕನಿಷ್ಟ ಮಟ್ಟದ ಜನನ ಪ್ರಮಾಣ ದಾಖಲಾಗಿರುವುದು ಮತ್ತು ಕೋವಿಡ್ -19 ಸಾಂಕ್ರಾಮಿಕ ಕಾರಣವಾಗಿತ್ತು. ಈ ಮಧ್ಯೆ, ದೇಶದ ಮಾನವಶಕ್ತಿಯಲ್ಲೂ ಇಳಿಕೆ ದಾಖಲಾಗಿದೆ. 16 ರಿಂದ 59 ವರ್ಷದ ನಡುವಿನ ಜನರನ್ನು ಮಾನವಶಕ್ತಿ ಎಂದು ಗುರುತಿಸಲಾಗುತ್ತಿದ್ದು 2022ರಿಂದ 10.75 ದಶಲಕ್ಷದಷ್ಟು ಇಳಿಕೆಯಾಗಿದೆ. 2022ರಿಂದ 60 ವರ್ಷ ಮೀರಿದವರ ಪ್ರಮಾಣ 16.93 ದಶಲಕ್ಷದಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News