ಚುನಾವಣಾ ಅಕ್ರಮದ ಹೊಣೆ ಹೊತ್ತು ಆಯುಕ್ತ ರಾಜೀನಾಮೆ

Photo : twitter
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಡೆದ ವ್ಯಾಪಕ ಚುನಾವಣಾ ಆಕ್ರಮಗಳಿಗೆ ಹೊಣೆಹೊತ್ತು ಪಾಕಿಸ್ತಾನದ ರಾವಲ್ಪಿಂಡಿ ಆಯುಕ್ತ ಲಿಯಾಕತ್ ಅಲಿ ಚಟ್ಟಾಹ ಅವರು ರಾಜೀನಾಮೆ ನೀಡಿದ್ದಾರೆ.
ಚುನಾವಣಾ ವಂಚನೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಮುಖ್ಯ ನ್ಯಾಯಮೂರ್ತಿಯವರು ಶಾಮೀಲಾಗಿದ್ದಾರೆಂದು ಅವರು ಆರೋಪಿಸಿದ್ದಾರೆ.
ರಾವಲ್ಪಿಂಡಿ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುದ್ದಿಗಾರರ ಜೊತೆ ಮಾತನಾಡಿದ ಅವರು ಚುನಾವಣೆಗಳಲ್ಲಿ ಸೋಲನುಭವಿಸಲಿದ್ದ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡಲಾಯಿತು ಎಂದು ಆರೋಪಿಸಿದರು.
ಚುನಾವಣಾ ಫಲಿತಾಂಶಗಳನನು ತಿರುಚಿದ ಹೊಣೆಯನ್ನು ವಹಿಸಿಕೊಂಡ ಅವು ತನ್ನ ಹುದ್ದೆಗೆ ರಾಜೀನಾಮೆಯನ್ನು ಘೋಷಿಸಿದರು.
‘‘ದೇಶದ ಬೆನ್ನಿಗೆ ಚೂರಿ ಹಾಕಿದಂತಹ ಈ ಕೃತ್ಯವನ್ನು ಎಸಗಿದ್ದುದು ತನಗೆ ನಿದ್ರೆ ಬಾರದಂತೆ ಮಾಡಿದೆ ಎಂದು ಅವರು ಹೇಳಿದರು. ನಾನು ಮಾಡಿದಂತಹ ಅನ್ಯಾಯಕ್ಕೆ ನನಗೆ ಶಿಕ್ಷೆಯಾಗಬೇಕಿದೆ. ಇದೇ ವೇಳೆ ಈ ಅಕ್ರಮದಲ್ಲಿ ಶಾಮೀಲಾದ ಇತರರಿಗೂ ಶಿಕ್ಷೆಯಾಗಬೇಕು’’ ಎಂದು ಲಿಯಾಕತ್ ಅಗ್ರಹಿಸಿದರು.
‘‘ರಾಜಕಾರಣಿಗಳಿಗಾಗಿ ಯಾವುದೇ ತಪ್ಪನ್ನು ಮಾಡದಿರಿ ಎಂಬುದೇ ಇಡೀ ಆಧಿಕಾರಿ ವರ್ಗಕ್ಕೆ ನಾನು ಮಾಡುವ ಮನವಿಯಾಗಿದೆ’’ ಎಂದವರು ಹೇಳಿದರು.
ತನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನಿಸುವಷ್ಟರ ಮಟ್ಟಿಗೆ ಒತ್ತಡವಿತ್ತು. ಆದರೆ ಆನಂತರ ತಾನು ಎಲ್ಲವನ್ನೂ ಜನರ ಮುಂದಿಡುವ ದೃಢನಿರ್ಧಾರ ಕೈಗೊಂಡಿದ್ದಾಗಿ ಲಿಯಾಕತ್ ತಿಳಿಸಿದರು.
ಲಿಯಾಕತ್ ಅವರು ಚುನಾವಣಾಧಿಕಾರಿ ವಿರುದ್ಧ ಮಾಡಿರುವ ಆರೋಪವನ್ನು ಪಾಕ್ ಚುನಾವಣಾ ಆಯೋಗವು ಬಲವಾಗಿ ತಳ್ಳಿಹಾಕಿದೆ.