ಯೆಮನ್ ಮೇಲಿನ ಅಮೆರಿಕದ ದಾಳಿಯ ಯೋಜನೆಯನ್ನು ಕುಟುಂಬದ ಜತೆ ಹಂಚಿಕೊಂಡಿದ್ದ ರಕ್ಷಣಾ ಸಚಿವ ಹೆಗ್ಸೆಥ್: ಮತ್ತೊಂದು ವಿವಾದ

Update: 2025-04-21 21:24 IST
ಯೆಮನ್ ಮೇಲಿನ ಅಮೆರಿಕದ ದಾಳಿಯ ಯೋಜನೆಯನ್ನು ಕುಟುಂಬದ ಜತೆ ಹಂಚಿಕೊಂಡಿದ್ದ ರಕ್ಷಣಾ ಸಚಿವ ಹೆಗ್ಸೆಥ್: ಮತ್ತೊಂದು ವಿವಾದ

ಹೆಗ್ಸೆಥ್ | PC : NDTV 

  • whatsapp icon

ವಾಷಿಂಗ್ಟನ್: ಯೆಮನ್ ಮೇಲೆ ದಾಳಿ ನಡೆಸುವ ಯೋಜನೆಯ ಸೂಕ್ಷ್ಮ ವಿವರಗಳನ್ನು ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆಥ್ ತಮ್ಮ ಕುಟುಂಬದ ಸದಸ್ಯರ ಜೊತೆ `ಸಿಗ್ನಲ್ ಚಾಟ್ ಗ್ರೂಫ್'ನಲ್ಲಿ ಹಂಚಿಕೊಂಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದು ಇದು ಮತ್ತೊಂದು ವಿವಾದಕ್ಕೆ ಎಡೆಮಾಡಿದೆ.

ಹೆಗ್ಸೆಥ್ ಹಾಗೂ ಇತರ ಅಧಿಕಾರಿಗಳು ಯೆಮನ್ ಯುದ್ಧ ಯೋಜನೆಯನ್ನು ಸಿಗ್ನಲ್ ಚಾಟ್ ಗ್ರೂಪ್‌ ನಲ್ಲಿ ಚರ್ಚಿಸುವ ಸಂದರ್ಭದಲ್ಲಿ `ದಿ ಅಟ್ಲಾಂಟಿಕ್' ಪತ್ರಿಕೆಯ ಸಂಪಾದಕ ಜೆಫ್ರೀ ಗೋಲ್ಡ್‍ ಬರ್ಗ್‍ ರನ್ನು ಪ್ರಮಾದವಶಾತ್ ಸೇರಿಸಿದ್ದರು ಎಂಬ ವಿವಾದದ ನಡುವೆಯೇ ಹೆಗ್ಸೆಥ್ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.

ಯೆಮನ್ ಮೇಲಿನ ದಾಳಿಯ ಸೂಕ್ಷ್ಮ ಮಾಹಿತಿಯನ್ನು ಮಾರ್ಚ್ 15ರಂದು ಹೆಗ್ಸೆಥ್ ತನ್ನ ಪತ್ನಿ ಜೆನ್ನಿಫರ್ ರಾಚೆಟ್, ಸಹೋದರ ಫಿಲ್ ಹೆಗ್ಸೆಥ್ ಮತ್ತು ವೈಯಕ್ತಿಕ ವಕೀಲ ಟಿಮ್ ಪರ್ಲಟೋರ್ ಜತೆ ಹಂಚಿಕೊಂಡಿದ್ದರು. ಯೆಮನ್‌ ನಲ್ಲಿನ ಹೌದಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಿರುವ ಎಫ್/ಎ-18 ಹಾರ್ನೆಟ್‍ಗಳ ಹಾರಾಟದ ಬಗ್ಗೆ ಚರ್ಚಿಸಲಾಗಿತ್ತು ಎಂದು ವರದಿ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಸರಕಾರದ ಅಧಿಕಾರಿಗಳು ` ಇದು ಅನೌಪಚಾರಿಕ ಗ್ರೂಫ್ ಚಾಟಿಂಗ್ ಆಗಿತ್ತು ಮತ್ತು ಅದರಲ್ಲಿ ಸೂಕ್ಷ್ಮ ಮತ್ತು ವರ್ಗೀಕೃತ ಮಾಹಿತಿಯ ಬಗ್ಗೆ ಚರ್ಚಿಸಿಲ್ಲ' ಎಂದಿದ್ದಾರೆ. ಫಾಕ್ಸ್ ನ್ಯೂಸ್‌ ನ ಮಾಜಿ ನಿರ್ಮಾಪಕಿಯಾಗಿರುವ ಹೆಗ್ಸೆಥ್ ಪತ್ನಿ ವಿದೇಶ ಪ್ರವಾಸದ ಸಂದರ್ಭ ಹಲವು ಬಾರಿ ಪತಿಯ ಜತೆ ತೆರಳಿದ್ದಾರೆ. ವಕೀಲ ಟಿಮ್ ಅವರು ಅಮೆರಿಕದ ರಕ್ಷಣಾ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. ಸಿಗ್ನಲ್ ಎನ್ನುವುದು ಗೌಪ್ಯತೆ ಕೇಂದ್ರಿತ ಮೆಸೇಜಿಂಗ್ ಅಪ್ಲಿಕೇಷನ್ ಆಗಿದ್ದು ಸುರಕ್ಷಿತ ಸಂವಹನಕ್ಕಾಗಿ ಆದ್ಯತೆಯ ಆಯ್ಕೆಯಾಗಿದೆ. ಚಾಟ್ ಗ್ರೂಪ್‌ ನಲ್ಲಿ ಟ್ರಂಪ್ ಅವರ ಮಧ್ಯಪ್ರಾಚ್ಯ ಪ್ರತಿನಿಧಿ ಸ್ಟೀವ್ ವಿಟ್ಕಾಫ್, ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಹಾಗೂ ಇತರ ಗಣ್ಯರು ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News