ಮುಹಮ್ಮದ್ ಯೂನಸ್ ವಿರುದ್ಧದ ಕಾನೂನುಕ್ರಮ ಅಮಾನತಿಗೆ ಆಗ್ರಹ
ಢಾಕ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊಫೆಸರ್ ಮುಹಮ್ಮದ್ ಯೂನಸ್ ವಿರುದ್ಧ ದಾಖಲಾಗಿರುವ ಹಲವಾರು ನ್ಯಾಯಾಲಯ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ 170ಕ್ಕೂ ಅಧಿಕ ಜಾಗತಿಕ ಮುಖಂಡರು, ಕಾನೂನು ಕ್ರಮಗಳನ್ನು ಅಮಾನತುಗೊಳಿಸುವಂತೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾರನ್ನು ಆಗ್ರಹಿಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಹಿತ 170ಕ್ಕೂ ಅಧಿಕ ಗಣ್ಯರು ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
83 ವರ್ಷದ ಯೂನಸ್ ಅವರು 2006ರಲ್ಲಿ ಬಡತನ ವಿರೋಧಿ ಅಭಿಯಾನಕ್ಕಾಗಿ ನೋಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದರು. ಇವರು 1983ರಲ್ಲಿ ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್‍ನಿಂದಾಗಿ ಬಾಂಗ್ಲಾದೇಶಕ್ಕೆ ಕಿರುಸಾಲದ ತವರು ಎಂಬ ಖ್ಯಾತಿ ದೊರಕಿತ್ತು. ಆದರೆ ಗ್ರಾಮೀಣ ಬ್ಯಾಂಕಿನ ಮೂಲಕ ಯೂನಸ್ ಸರಕಾರದ ಅನುಮತಿಯಿಲ್ಲದೆ ವಿದೇಶದಿಂದ ನಿಧಿ ಸಂಗ್ರಹಿಸಿದ್ದಾರೆ. ಜತೆಗೆ, ಸರಕಾರದ ನಿವೃತ್ತಿ ನಿಯಮವನ್ನು ಉಲ್ಲಂಘಿಸಿದ ಆರೋಪವನ್ನು ಯೂನಸ್ ವಿರುದ್ಧ ದಾಖಲಿಸಿದ ಹಸೀನಾ ಸರಕಾರ 2013ರಲ್ಲಿ ವಿಚಾರಣೆ ಆರಂಭಿಸಿತ್ತು. ಗ್ರಾಮೀಣ ಬ್ಯಾಂಕ್ ಮುಖ್ಯಸ್ಥರಾಗಿ ಯೂನಸ್ ಗ್ರಾಮೀಣ ಬಡ ಮಹಿಳೆಯರಿಂದ ಬಲಾತ್ಕಾರವಾಗಿ ಸಾಲ ವಸೂಲಿ ಮಾಡುತ್ತಿದ್ದು ಅವರೊಬ್ಬ ರಕ್ತಹೀರುವ ಜಿಗಣೆ ಎಂದು ಹಸೀನಾ ಆರೋಪಿಸಿದ್ದರು.