ಪತ್ರಿಕಾ ಸ್ವಾತಂತ್ರ್ಯ, ಮಾನವ ಹಕ್ಕುಗಳ ಪ್ರಾಮುಖ್ಯತೆ ಬಗ್ಗೆ ಮೋದಿ ಜತೆ ಚರ್ಚೆ: ಬೈಡನ್
ಹನೋಯಿ: ಹೊಸದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ಪತ್ರಿಕಾ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳನ್ನು ಗೌರವಿಸುವ ವಿಷಯವನ್ನು ಚರ್ಚಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಪ್ರಧಾನಿ ಮೋದಿ ಜತೆಗಿನ ಚರ್ಚೆಯಲ್ಲಿ ಭಾರತ-ಅಮೆರಿಕ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ ನಾನು ಯಾವಾಗಲೂ ಮಾಡುವಂತೆ, ಮಾನವ ಹಕ್ಕುಗಳನ್ನು ಗೌರವಿಸುವ ಪ್ರಾಮುಖ್ಯತೆ ಮತ್ತು ಬಲಿಷ್ಟ ಮತ್ತು ಸಮೃದ್ಧ ದೇಶವನ್ನು ಕಟ್ಟುವಲ್ಲಿ ನಾಗರಿಕ ಸಮಾಜ ಮತ್ತು ಮುಕ್ತ ಮಾಧ್ಯಮದ ಪ್ರಾಮುಖ್ಯತೆಯನ್ನೂ ಚರ್ಚಿಸಿದ್ದೇನೆ' ಎಂದು ವಿಯೆಟ್ನಾಮ್ನ ಹವಾಯಿಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಬೈಡನ್ ಹೇಳಿದ್ದಾರೆ. ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಒಳಗೊಳ್ಳುವಿಕೆ, ಬಹುತ್ವ, ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳು ಒಂದು ದೇಶದ ಯಶಸ್ಸಿಗೆ ಅತ್ಯಂತ ನಿರ್ಣಾಯಕವಾಗಿವೆ ಎಂಬ ಅಂಶವನ್ನು ಜಿ20 ಶೃಂಗಸಭೆಯಲ್ಲಿ ಪ್ರತಿಪಾದಿಸಲಾಗಿದೆ ಎಂದು ಬೈಡನ್ ಹೇಳಿದ್ದಾರೆ.
ನಮ್ಮ ಜಾಗತಿಕ ನಾಯಕತ್ವವನ್ನು ಪ್ರದರ್ಶಿಸಲು ಅಮೆರಿಕಕ್ಕೆ ಇದು ಪ್ರಮುಖ ಕ್ಷಣವಾಗಿದೆ. ಪ್ರಪಂಚದಾದ್ಯಂತದ ಜನರಿಗೆ ಹೆಚ್ಚು ಮುಖ್ಯವಾದ ಸವಾಲುಗಳನ್ನು ಪರಿಹರಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ಅಂತರ್ಗತ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವುದು, ಹವಾಮಾನ ಬಿಕ್ಕಟ್ಟನ್ನು ಪರಿಹರಿಸುವುದು, ಆಹಾರ ಭದ್ರತೆ ಮತ್ತು ಶಿಕ್ಷಣವನ್ನು ಬಲಪಡಿಸುವುದು, ಜಾಗತಿಕ ಆರೋಗ್ಯ ಮತ್ತು ಆರೋಗ್ಯ ಭದ್ರತೆಯನ್ನು ಮುನ್ನಡೆಸುವುದು, ಇತ್ಯಾದಿಗಳ ಮೂಲಕ ಉತ್ತಮ ಭವಿಷ್ಯಕ್ಕಾಗಿ ಅಮೆರಿಕವು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವ ಉತ್ತಮ ಪಾಲುದಾರ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ ಎಂದವರು ಹೇಳಿದ್ದಾರೆ.
ಮಧ್ಯಪ್ರಾಚ್ಯ ಮತ್ತು ಇಸ್ರೇಲ್ನೊಂದಿಗೆ ಭಾರತವನ್ನು ಯುರೋಪ್ಗೆ ಸಂಪರ್ಕಿಸುವ ಕಾರಿಡಾರ್ ಬಗ್ಗೆ ಉಲ್ಲೇಖಿಸಿದ ಬೈಡನ್ `ಇದು ಪರಿವರ್ತಕ ಆರ್ಥಿಕ ಹೂಡಿಕೆಯಲ್ಲಿ ಅಪರಿಮಿತ ಅವಕಾಶಗಳನ್ನು ಸೃಷ್ಟಿಸಲಿದೆ' ಎಂದರು. ವಿಯೆಟ್ನಾಮ್ ಮತ್ತು ಇತರ ದೇಶಗಳೊಂದಿಗೆ ಅಮೆರಿಕದ ಸಂಬಂಧಗಳನ್ನು ನಿರ್ಮಿಸುವ ಮೂಲಕ ಪ್ರಪಂಚದಾದ್ಯಂತ ಸ್ಥಿರತೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಚೀನಾದ ಜತೆ ಶೀತಲ ಯುದ್ಧ ಆರಂಭಿಸಲು ತಾವು ಪ್ರಯತ್ನಿಸುತ್ತಿಲ್ಲ ಎಂದು ಇದೇ ಸಂದರ್ಭ ಬೈಡನ್ ಸ್ಪಷ್ಟಪಡಿಸಿದರು