2023ರಲ್ಲಿ ಅಮೆರಿಕದ ಪೌರತ್ವ ಪಡೆದವರ ಪೈಕಿ ಭಾರತೀಯರೆಷ್ಟು ಗೊತ್ತೇ?
ವಾಷಿಂಗ್ಟನ್: ಪ್ರಸಕ್ತ ಹಣಕಾಸು ವರ್ಷದಲ್ಲಿ 8.7 ಲಕ್ಷ ಮಂದಿ ವಿದೇಶಿಯರು ಅಮೆರಿಕದ ಪೌರತ್ವ ಪಡೆದಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಂದು ಲಕ್ಷದಷ್ಟು ಕಡಿಮೆ. 1.1 ಲಕ್ಷಕ್ಕೂ ಅಧಿಕ ಮಂದಿ ಮೆಕ್ಸಿಕನ್ನರು ಅಮೆರಿಕದ ಪೌರತ್ವ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಈ ವರ್ಷ ಒಟ್ಟು ಅಮೆರಿಕದ ಪೌರತ್ವ ಪಡೆದವರ ಪೈಕಿ ಇದು ಶೇಕಡ 12.7ರಷ್ಟಾಗಿದೆ. ಒಟ್ಟು 59,100 ಮಂದಿ ಭಾರತೀಯರು (ಶೇಕಡ 6.7) ಈ ಬಾರಿ ಅಮೆರಿಕದ ಪೌರತ್ವ ಪಡೆದಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ.
ಅಮೆರಿಕ ಪೌರತ್ವ ಪಡೆದವರಲ್ಲಿ 44,800 ಮಂದಿ ಫಿಲಿಪೀನ್ಸ್ ಮೂಲದವರು. ಅಗ್ರ ಐದು ದೇಶಗಳ ಪೈಕಿ ಡೊಮಿನಿಕನ್ ರಿಪಬ್ಲಿಕ್ ಮತ್ತು ಕ್ಯೂಬಾ ಸ್ಥಾನ ಪಡೆದಿದ್ದು, ಈ ಐದು ದೇಶಗಳ ಪಾಲು ಶೇಕಡ 32ರಷ್ಟಾಗಿದೆ.
ಅಮೆರಿಕದ ಪೌರತ್ವ ಮತ್ತು ಇಮಿಗ್ರೇಶನ್ ಸೇವೆಗಳ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ 2023ರ ವಾರ್ಷಿಕ ವರದಿ ಪ್ರಕಾರ, ಕಳೆದ ಒಂದು ದಶಕದಲ್ಲಿ ನೀಡಲಾದ ಸಂಖ್ಯೆಯಷ್ಟು ಪೌರತ್ವವನ್ನು 2022 ಹಾಗೂ 2023ರಲ್ಲಿ ನೀಡಲಾಗಿದೆ. 2022ರ ಯುಎಸ್ ಸಿಐಎಸ್ (United States Citizenship and Immigration Services) ಪ್ರಗತಿ ವರದಿಯಲ್ಲಿ ದೇಶವಾರು ಅಂಕಿ ಅಂಶಗಳನ್ನು ನೀಡಿರಲಿಲ್ಲ. ಈ ಮಾಹಿತಿಯನ್ನು ದೇಶದ ಒಳನಾಡು ಭದ್ರತಾ ವಿಭಾಗ ನೀಡುತ್ತಿತ್ತು.
2022ರಲ್ಲಿ ಸುಮಾರು 9.69 ಲಕ್ಷ ಮಂದಿ ಅಮೆರಿಕದ ಪೌರತ್ವ ಪಡೆದಿದ್ದು, ಮೆಕ್ಸಿಕೊದವರು 1.3 ಲಕ್ಷದೊಂದಿಗೆ (ಶೇಕಡ 13.3) ಅಗ್ರಸ್ಥಾನದಲ್ಲಿದ್ದರು. ಭಾರತದ ಪಾಲು 65,960 (ಶೇಕಡ 6.8) ಇತ್ತು. ಫಿಲಿಪೀನ್ಸ್ ನ 53,413 ಮಂದಿ ಅಮೆರಿಕದ ಪೌರತ್ವ ಪಡೆದು ಶೇಕಡ 5.5ರಷ್ಟು ಪಾಲು ಹೊಂದಿದ್ದರು.
ಗ್ರೀನ್ ಕಾರ್ಡ್ (ಕಾನೂನುಬದ್ಧ ಖಾಯಂ ನಿವಾಸಿ) ಪಡೆದು ಐದು ವರ್ಷ ಕಳೆದವರು ಅಮೆರಿಕದ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಮೆರಿಕನ್ ಮಹಿಳೆಯರನ್ನು ವಿವಾಹವಾದ ವ್ಯಕ್ತಿಗಳಿಗೆ, ಈ ಅವಧಿಯನ್ನು ಮೂರು ವರ್ಷಗಳಿಗೆ ಇಳಿಸಲಾಗಿದೆ. ಆದರೆ ಭಾರತೀಯರಿಗೆ ಗ್ರೀನ್ ಕಾರ್ಡ್ ಪಡೆಯಲು ಕೂಡಾ ಹಲವು ದಶಕಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಇದು ಅಮೆರಿಕದ ಪೌರತ್ವ ಪಡೆಯುವವರನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತಿದೆ.