ರಾಜತಾಂತ್ರಿಕ ಕ್ರಮಗಳ ಮೂಲಕ ಉದ್ವಿಗ್ನತೆ ಶಮನ: ಪಾಕ್ ಪ್ರಧಾನಿಗೆ ನವಾಝ್ ಷರೀಫ್ ಸಂದೇಶ

ನವಾಝ್ ಷರೀಫ್ | PC : NDTV
ಇಸ್ಲಾಮಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ- ಪಾಕಿಸ್ತಾನ ನಡುವೆ ಉದ್ವಿಗ್ನತೆ ಪರಾಕಾಷ್ಠೆಗೆ ತಲುಪಿರುವಂತೆಯೇ ರಾಜತಾಂತ್ರಿಕ ಕ್ರಮಗಳ ಮೂಲಕ ಉದ್ವಿಗ್ನತೆ ಶಮನಕ್ಕೆ ಕ್ರಮ ಕೈಗೊಳ್ಳುವಂತೆ ಮತ್ತು ಭಾರತ ವಿರೋಧಿ ಹೇಳಿಕೆಗಳಿಂದ ದೂರ ಇರುವಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಷರೀಫ್ ಹಾಲಿ ಪ್ರಧಾನಿ ಹಾಗೂ ತನ್ನ ಸಹೋದರ ಶೆಹಬಾಝ್ ಷರೀಫ್ ಗೆ ಸಲಹೆ ನೀಡಿರುವುದಾಗಿ ವರದಿಯಾಗಿದೆ.
ವರದಿಗಳ ಪ್ರಕಾರ, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ನಡೆದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯಲ್ಲಿ ನಡೆದ ಮಾತುಕತೆಯ ವಿವರವನ್ನು ಪ್ರಧಾನಿ ಶೆಹಬಾಝ್ ಷರೀಫ್ ಪಿಎಂಎಲ್-ಎನ್ ಅಧ್ಯಕ್ಷ ನವಾಝ್ ಷರೀಫ್ ಗೆ ರವಿವಾರ ಒದಗಿಸಿದರು. ಈ ಸಂದರ್ಭ ನವಾಝ್ ಷರೀಫ್ ` ಸೌಹಾರ್ದಯುತ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಡಿ ಬಿಕ್ಕಟ್ಟು ಶಮನಕ್ಕೆ ಆದ್ಯತೆ ನೀಡುವಂತೆ ಸಲಹೆ ಮಾಡಿದರು ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ.