ಎಲಾನ್ ಮಸ್ಕ್ ಹಿಂದಿಕ್ಕಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಬೆರ್ನಾರ್ಡ್ ಆರ್ನಾಲ್ಟ್
ಹೊಸದಿಲ್ಲಿ: LVMH ನ ಅಧ್ಯಕ್ಷ ಹಾಗೂ ಸಿಇಒ ಆಗಿರುವ ಬೆರ್ನಾರ್ಡ್ ಆರ್ನಾಲ್ಟ್ ಅವರು ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಫ್ರಾನ್ಸ್ ದೇಶದವರಾಗಿರುವ ಬೆರ್ನಾರ್ಡ್ ಮತ್ತು ಅವರ ಕುಟುಂಬದ ಒಟ್ಟು ಸಂಪತ್ತಿನ ಮೌಲ್ಯ 207.6 ಬಿಲಿಯನ್ ಡಾಲರ್ ಎಂದು ಫೋರ್ಬ್ಸ್ ಹೇಳಿದೆ.
ಕಳೆದ ಶುಕ್ರವಾರ ಬೆರ್ನಾರ್ಡ್ ಅವರ ಒಟ್ಟು ಸಂಪತ್ತಿನ ಮೌಲ್ಯ ಟೆಸ್ಲಾ ಸಿಇಒ ಆಗಿರುವ ಮಸ್ಕ್ ಅವರ 204.7 ಬಿಲಿಯನ್ ಡಾಲರ್ ಮೌಲ್ಯದ ಒಟ್ಟು ಸಂಪತ್ತನ್ನು ದಾಟಿತ್ತು. ಮಸ್ಕ್ ಅವರ ಸಂಪತ್ತು 18 ಬಿಲಿಯನ್ ಡಾಲರ್ ಇಳಿಕೆ ಕಂಡಿತ್ತು.
2022ರಲ್ಲಿ ಕೂಡ ಒಮ್ಮೆ ಬೆರ್ನಾರ್ಡ್ ಆರ್ನಾಲ್ಟ್ ಅವರು ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು.
ಇದೀಗ ಬೆರ್ನಾರ್ಡ್ ಆರ್ನಾಲ್ಟ್ 207 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೆ ಎರಡನೇ ಸ್ಥಾನದಲ್ಲಿರುವ ಎಲಾನ್ ಮಸ್ಕ್ ಅವರ ಒಟ್ಟು ಸಂಪತ್ತಿನ ಮೌಲ್ಯ 204.7 ಬಿಲಿಯನ್ ಡಾಲರ್ ಆಗಿದೆ. ಜೆಫ್ ಬೆಝೋಸ್ ಮೂರನೇ ಸ್ಥಾನದಲ್ಲಿ (181.3 ಬಿಲಿಯನ್ ಡಾಲರ್), ಲಾರಿ ಎಲ್ಲಿಸನ್ ನಾಲ್ಕನೇ ಸ್ಥಾನದಲ್ಲಿ (142.2 ಬಿಲಿಯನ್ ಡಾಲರ್), ಮಾರ್ಕ್ ಝುಕರ್ ಬರ್ಗ್ ಐದನೇ ಸ್ಥಾನದಲ್ಲಿ (1391.1 ಬಿಲಿಯನ್ ಡಾಲರ್) ಮತ್ತು ವಾರೆನ್ ಬಫೆಟ್ (127.2 ಬಿಲಿಯನ್ ಡಾಲರ್)ಆರನೇ ಸ್ಥಾನದಲ್ಲಿದ್ದಾರೆ.
ಆದರೆ ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ 199 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತಿನೊಂದಿಗೆ ಎಲಾನ್ ಮಸ್ಕ್ ಈಗಲೂ ಮೊದಲನೇ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಅಮೆಝಾನ್ ಮುಖ್ಯಸ್ಥ ಜೆಫ್ ಬೆಝೋಸ್ (184 ಬಿಲಿಯನ್ ಡಾಲರ್) ಮತ್ತು ಮೂರನೇ ಸ್ಥಾನದಲ್ಲಿ ಬೆರ್ನಾರ್ಡ್ ಆರ್ನಾಲ್ಟ್ (183 ಬಿಲಿಯನ್ ಡಾಲರ್) ಇದ್ದಾರೆ.