ಉಕ್ರೇನ್ - ರಶ್ಯ ಶಾಂತಿ ಸಭೆ ಆಯೋಜಿಸಲು ಟರ್ಕಿ ಸಿದ್ಧ: ಎರ್ಡೋಗನ್

Update: 2024-03-09 17:02 GMT

ತಯ್ಯಿಪ್ ಎರ್ಡೋಗನ್ Photo : NDTV

ಅಂಕಾರ: ಯುದ್ಧವನ್ನು ಅಂತ್ಯಗೊಳಿಸಲು ಉಕ್ರೇನ್ ಮತ್ತು ರಶ್ಯದ ನಡುವೆ ಸಭೆ ಆಯೋಜಿಸಲು ಟರ್ಕಿ ಸಿದ್ಧ ಎಂದು ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಶುಕ್ರವಾರ ಹೇಳಿದ್ದಾರೆ.

ಇಸ್ತಾಂಬುಲ್ ನಲ್ಲಿ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಜತೆ ಮಾತುಕತೆ ನಡೆಸಿದ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎರ್ಡೋಗನ್ ` ಯುದ್ಧದ ಕುರಿತು ವಿವರವಾಗಿ ಚರ್ಚಿಸಿದ್ದೇವೆ. ಮಾತುಕತೆಯ ಮೂಲಕ ಯುದ್ಧ ಅಂತ್ಯಗೊಳಿಸಲು ನಮ್ಮ ಗರಿಷ್ಟ ನೆರವು ನೀಡಲಿದ್ದೇವೆ. ನಾವು ಶಾಂತಿ ಸಭೆ ಆಯೋಜಿಸಲಿದ್ದು ಇದರಲ್ಲಿ ರಶ್ಯವೂ ಭಾಗವಹಿಸಲಿದೆ' ಎಂದರು. ಉಕ್ರೇನ್ನ ಸಾರ್ವಭೌಮತ್ವಕ್ಕೆ ಟರ್ಕಿಯ ಬೆಂಬಲವನ್ನು ಪುನರುಚ್ಚರಿಸಿದರು. ಮಾರ್ಚ್ 15ರಿಂದ 17ರವರೆಗೆ ನಡೆಯಲಿರುವ ರಶ್ಯದ ಚುನಾವಣೆಯ ಬಳಿಕ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೂ ಟರ್ಕಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಮುಂದಿನ ತಿಂಗಳು ಸ್ವಿಝರ್ಲ್ಯಾಂಡ್ನಲ್ಲಿ ನಡೆಯಲಿರುವ ಪ್ರಥಮ ಹಂತದ ಸಭೆಗೆ ರಶ್ಯವನ್ನು ಆಹ್ವಾನಿಸುವುದಿಲ್ಲ. ಆದರೆ ಉಕ್ರೇನ್ನ ಮಿತ್ರರಾಷ್ಟ್ರಗಳೊಂದಿಗೆ ಶಾಂತಿಗಾಗಿ ಮಾರ್ಗಸೂಚಿಯನ್ನು ಅಂತಿಮಗೊಳಿಸಿದ ಬಳಿಕ ಮುಂದಿನ ಹಂತದ ಸಭೆಯಲ್ಲಿ ರಶ್ಯದ ಪ್ರತಿನಿಧಿ ಪಾಲ್ಗೊಳ್ಳಲಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ನೇಟೊ ಸದಸ್ಯ ಟರ್ಕಿಯು ಉಕ್ರೇನ್ನ ಪ್ರಾದೇಶಿಕ ಸಮಗ್ರತೆಯನ್ನು ಬೆಂಬಲಿಸುವ ಜತೆಗೆ ರಶ್ಯದ ಜತೆಗೆ ಸೌಹಾರ್ದಯುತ ಸಂಬಂಧವನ್ನೂ ಮುಂದುವರಿಸಿದೆ. ಅಲ್ಲದೆ ಉಕ್ರೇನ್ನ ಆಹಾರಧಾನ್ಯ ರಫ್ತಿಗೆ ರಶ್ಯದ ನಿರ್ಬಂಧವನ್ನು ತೆರವುಗೊಳಿಸುವ `ಕಪ್ಪು ಸಮುದ್ರ ಆಹಾರಧಾನ್ಯ ಒಪ್ಪಂದ' ಏರ್ಪಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

ರಶ್ಯ ಮತ್ತು ಉಕ್ರೇನ್ ನಡುವೆ 2022ರಲ್ಲಿ ಶಾಂತಿ ಮಾತುಕತೆಯನ್ನು ಟರ್ಕಿ ಆಯೋಜಿಸಿತ್ತು. ಆದರೆ ಈ ಮಾತುಕತೆಯನ್ನು ಮುಂದುವರಿಸಲು ಯಾವುದೇ ರಾಜತಾಂತ್ರಿಕ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ಸೂಚಿಸಿತ್ತು. ಕಳೆದ ವಾರ ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ್ದ ಟರ್ಕಿ ವಿದೇಶಾಂಗ ಸಚಿವ ಹಕಾನ್ ಫಿದಾನ್, ಇದು ರಶ್ಯ ಮತ್ತು ಉಕ್ರೇನ್ಗೆ ಕದನ ವಿರಾಮ ಮಾತುಕತೆ ಆರಂಭಿಸಲು ಸಕಾಲವಾಗಿದೆ ಎಂದಿದ್ದರು. ಉಕ್ರೇನ್ ಹಾಗೂ ಟರ್ಕಿ ದೇಶಗಳು ರಕ್ಷಣಾ ಉದ್ಯಮದಲ್ಲಿ ಸಹಕಾರವನ್ನು ಹೊಂದಿದ್ದು ಉಕ್ರೇನ್ ರಾಜಧಾನಿ ಕೀವ್ನಲ್ಲಿ ಜಂಟಿಯಾಗಿ ಡ್ರೋನ್ ಉತ್ಪಾದಿಸುವ ಫ್ಯಾಕ್ಟರಿ ಆರಂಭಿಸುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದ್ದು ಈಗ ನಡೆಯುತ್ತಿರುವ ಯುದ್ಧದಿಂದಾಗಿ ಈ ಯೋಜನೆ ಸ್ಥಗಿತಗೊಂಡಿದೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News