ಲೆಬನಾನ್: ಸೇನಾ ವಾಹನದಲ್ಲಿ ಸ್ಫೋಟ ; ಸೇನಾಧಿಕಾರಿ ಸಹಿತ 5 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಬೈರೂತ್: ದಕ್ಷಿಣ ಲೆಬನಾನ್ ನ ಕ್ಸೇಬೆ -ಬ್ರೇಕೆ ಹೆದ್ದಾರಿಯಲ್ಲಿ ಮದ್ದುಗುಂಡುಗಳನ್ನು ಸಾಗಿಸುತ್ತಿದ್ದ ಮಿಲಿಟರಿ ವಾಹನದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸೇನಾಧಿಕಾರಿ, ಇಬ್ಬರು ಯೋಧರ ಸಹಿತ ಐವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ದಕ್ಷಿಣ ಲೆಬನಾನ್ ನಲ್ಲಿ ಇತ್ತೀಚಿನ ಯುದ್ಧದಿಂದ ಉಳಿದ ಮದ್ದುಗುಂಡುಗಳನ್ನು ತುಂಬಿಸಿದ್ದ ಸೇನಾ ವಾಹನದಲ್ಲಿ ಸ್ಫೋಟ ಸಂಭವಿಸಿದ್ದು ವಾಹನದಲ್ಲಿದ್ದ ಸೇನಾಧಿಕಾರಿ ಮತ್ತು ಇಬ್ಬರು ಯೋಧರು, ಸಮೀಪದ ಕಾರಿನಲ್ಲಿದ್ದ ಮಹಿಳೆ ಹಾಗೂ ಆಕೆಯ ಮಗು ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಲೆಬನಾನ್ ಸೇನಾ ಕಮಾಂಡ್ ಹೇಳಿದೆ. ಸ್ಫೋಟ ಸಂಭವಿಸಿದ ಸಂದರ್ಭದಲ್ಲೇ ಸಮೀಪದ ಅರ್ನೌನ್, ಕೆಫಾರ್ ಟಿಬ್ನಿಟ್ ನಗರಗಳ ನಡುವೆ ಇರುವ ಜಲ್‍ಶಿಹಾಬ್ ಪ್ರದೇಶದಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು ಎಂದು ವರದಿಯಾಗಿದೆ.
ಹೌಲಾ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಕ್ಷಿಪಣಿ ದಾಳಿಯಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ. ಕವಾಥರಿಯೆಹ್ ಅಲ್-ಸಿಯಾದ್ ಅಲ್-ಶರ್ಕಿಯಾದಲ್ಲಿ ಕಾರೊಂದನ್ನು ಗುರಿಯಾಗಿಸಿ ನಡೆದ ಮಾರ್ಗದರ್ಶಿ ಕ್ಷಿಪಣಿ ಹೊಂದಿದ್ದ ಡ್ರೋನ್ ದಾಳಿಯಲ್ಲಿ ಹೆಜ್ಬುಲ್ಲಾದ 4400 ಬಟಾಲಿಯನ್ ನ ಡೆಪ್ಯುಟಿ ಕಮಾಂಡರ್ ಹುಸೇನ್ ಅಲಿ ನಾಸರ್ ಸಾವನ್ನಪ್ಪಿರುವುದಾಗಿ ಇಸ್ರೇಲ್ ಸೇನೆಯ ವಕ್ತಾರ ಅವಿಚೆಯ್ ಅಡ್ರಾಯಿ ಹೇಳಿದ್ದಾರೆ.