ಗಾಝಾ | ಇಸ್ರೇಲ್ ದಾಳಿಯಲ್ಲಿ 15 ಮಂದಿ ಮೃತ್ಯು

Update: 2024-12-01 17:26 GMT

PC : PTI

ಗಾಝಾ : ಗಾಝಾದ್ಯಂತ ಇಸ್ರೇಲ್ ಸೇನೆ ತೀವ್ರ ಬಾಂಬ್ ದಾಳಿ ಮುಂದುವರಿಸಿದ್ದು ಉತ್ತರ ಗಾಝಾದಲ್ಲಿ ಹಲವು ಮನೆಗಳನ್ನು ಧ್ವಂಸಗೊಳಿಸಿದೆ. ಮಧ್ಯ ಗಾಝಾದಲ್ಲಿ ರವಿವಾರ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 15 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

ನುಸೀರಾತ್ ಶಿಬಿರ ಪ್ರದೇಶದ ಮನೆಯೊಂದರ ಮೇಲೆ ಇಸ್ರೇಲ್‍ ನ ವೈಮಾನಿಕ ದಾಳಿಯಲ್ಲಿ 6 ಮಂದಿ ಮೃತಪಟ್ಟಿದ್ದರೆ, ಗಾಝಾ ನಗರದಲ್ಲಿ ಮತ್ತೊಂದು ಮನೆಯ ಮೇಲೆ ನಡೆದ ದಾಳಿಯಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಗಾಝಾ ಪಟ್ಟಿಯ ಖಾನ್‍ಯೂನಿಸ್ ನಗರದಲ್ಲಿನ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮಕ್ಕಳು, ಈಜಿಪ್ಟ್ ಗಡಿಭಾಗದ ಸನಿಹದಲ್ಲಿರುವ ರಫಾ ನಗರದ ಮೇಲೆ ನಡೆದ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.

ಉತ್ತರ ಗಾಝಾದ ಜಬಾಲಿಯಾ, ಬೀಟ್ ಲಾಹಿಯಾ ಮತ್ತು ಬೀಟ್ ಹನೌನ್ ನಗರಗಳಲ್ಲಿನ ಹಲವು ಮನೆಗಳನ್ನು ಇಸ್ರೇಲ್ ಮಿಲಿಟರಿ ಸ್ಫೋಟಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಉತ್ತರ ಗಾಝಾದಲ್ಲಿ ತೀವ್ರ ಬಾಂಬ್‍ ದಾಳಿ ನಡೆಸುವ ಮೂಲಕ ಅಲ್ಲಿನ ನಿವಾಸಿಗಳನ್ನು ಬಲವಂತವಾಗಿ ಸ್ಥಳಾಂತರಿಸಿ ಅಲ್ಲಿ ಬಫರ್ ವಲಯ ಸ್ಥಾಪಿಸುವುದು ಇಸ್ರೇಲ್‍ನ ಉದ್ದೇಶವಾಗಿದೆ ಎಂದು ಫೆಲೆಸ್ತೀನಿ ಅಧಿಕಾರಿಗಳು ಹೇಳಿದ್ದಾರೆ.

ಟ್ಯಾಂಕ್ ವಿಧ್ವಂಸಕ ರಾಕೆಟ್‍ಗಳು ಮತ್ತು ಹೊಂಚು ದಾಳಿಯ ಮೂಲಕ ಇಸ್ರೇಲ್‍ ನ ಹಲವು ಯೋಧರನ್ನು ಹತ್ಯೆ ಮಾಡಿರುವುದಾಗಿ ಹಮಾಸ್ ಹೇಳಿದೆ. ಗಾಝಾದಿಂದ ಬಂಧಿಸಿದ್ದ ಇಬ್ಬರು ಫೆಲೆಸ್ತೀನಿಯರು ಇಸ್ರೇಲ್ ಕಸ್ಟಡಿಯಲ್ಲಿ ಮೃತಪಟ್ಟಿದ್ದು ಇದರೊಂದಿಗೆ ಕಳೆದ ಅಕ್ಟೋಬರ್‍ನಲ್ಲಿ ಯುದ್ಧ ಆರಂಭಗೊಂಡ ಬಳಿಕ ಬಂಧನದಲ್ಲಿದ್ದಾಗ ಮೃತಪಟ್ಟ ಫೆಲೆಸ್ತೀನೀಯರ ಸಂಖ್ಯೆ 47ಕ್ಕೇರಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News