ಗಾಝಾ | 48 ತಾಸುಗಳಲ್ಲಿ ಇಸ್ರೇಲ್ ದಾಳಿಗೆ ಕನಿಷ್ಠ 120 ಫೆಲೆಸ್ತೀನಿಯರ ಬಲಿ

Update: 2024-11-24 15:57 GMT

PC ; aljazeera.com

ಗಾಝಾ : ಸಂಘರ್ಷ ಪೀಡಿತ ಗಾಝಾದಲ್ಲಿ ಇಸ್ರೇಲ್‌ನ ಕ್ರೌರ್ಯ ಅವ್ಯಾಹತವಾಗಿ ಮುಂದುವರಿದ್ದು, ಕಳೆದ 48 ತಾಸುಗಳಲ್ಲಿ ಕನಿಷ್ಠ 120 ಫೆಲೆಸ್ತೀನ್ ನಾಗರಿಕರು ಇಸ್ರೇಲಿ ಪಡೆಗಳ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ. ಗಾಝಾ ನಗರದ ಹೊರವಲಯದಲ್ಲಿರುವ ಝಿತೊವುನ್‌ನಲ್ಲಿ ಇಸ್ರೇಲ್ ಸೇನೆ ಶುಕ್ರವಾರ ರಾತ್ರಿ ನಡೆಸಿದ ಭೀಕರ ವಾಯುದಾಳಿಯಲ್ಲಿ ವಸತಿ ಕಟ್ಟಡವೊಂದು ನಾಶವಾಗಿದ್ದು, ಅದರಲ್ಲಿದ್ದ ಏಳು ಮಂದಿ ಫೆಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ.

ದಕ್ಷಿಣ ಹಾಗೂ ಕೇಂದ್ರ ಗಾಝಾದ ವಿವಿಧೆಡೆ ಇಸ್ರೇಲ್ ಸೇನೆ ನಡೆಸಿದ ವಾಯುದಾಳಿ ಮತ್ತು ಕ್ಷಿಪಣಿದಾಳಿಗಳಲ್ಲಿ ನೂರಕ್ಕೂ ಅಧಿಕ ಮಂದಿ ಫೆಲೆಸ್ತೀನ್ ನಾಗರಿಕರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಕೇಂದ್ರ ಗಾಝಾದಲ್ಲಿರುವ ನುಸೈರತ್ ನಿರಾಶ್ರಿತ ಶಿಬಿರದಲ್ಲಿರುವ ಮಸೀದಿಯೊಂದರ ಮೇಲೂ ಇಸ್ರೇಲ್ ವಾಯುದಾಳಿ ನಡೆಸಿದೆ.

ಇತ್ತ ಉತ್ತರ ಗಾಝಾದ ಒಳಪ್ರದೇಶಗಳಿಗೂ ಇಸ್ರೇಲಿ ಪಡೆಗಳು ನುಗ್ಗಿದ್ದು, ಬಾಂಬ್ ದಾಳಿಯನ್ನು ತೀವ್ರಗೊಳಿಸಿವೆ. ಅಲ್ಲಿ ಭಾಗಶಃ ಕಾರ್ಯನಿರ್ವಹಿಸುತ್ತಿದ್ದ ಒಂದೇ ಒಂದು ಆಸ್ಪತ್ರೆ ಕೂಡಾ ಇಸ್ರೇಲ್ ಸೇನೆಯ ದಾಳಿಗೆ ತುತ್ತಾಗಿದ್ದು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಉತ್ತರ ಗಾಝಾದಲ್ಲಿ ಇಸ್ರೇಲಿ ಪಡೆಗಳ ದಾಳಿಯಲ್ಲಿ ತನ್ನ ವಶದಲ್ಲಿದ್ದ ಇಸ್ರೇಲಿ ಮಹಿಳಾ ಒತ್ತೆಯಾಳು ಸಾವನ್ನಪ್ಪಿರುವುದಾಗಿ ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್‌ನ ವಕ್ತಾರರೊಬ್ಬರು ತಿಳಿಸಿದ್ದಾರೆ. ದಾಳಿಯಲ್ಲಿ ಇನ್ನೋರ್ವ ಮಹಿಳಾ ಕೈದಿಯೂ ಗಾಯಗೊಂಡಿದ್ದು, ಆಕೆಯ ಸ್ಥಿತಿಯೂ ಚಿಂತಾಜನಕವಾಗಿರುವುದಾಗಿ ಅವರು ಹೇಳಿದ್ದಾರೆ. ಇದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರೇ ಹೊಣೆಗಾರರಾಗುತ್ತಾರೆಂದು ಹಮಾಸ್ ವಕ್ತಾರ ಆಪಾದಿಸಿದ್ದಾರೆ.

ಹಮಾಸ್‌ನ ವರದಿ ಬಗ್ಗೆ ತಾನು ತನಿಖೆ ನಡೆಸುತ್ತಿರುವುದಾಗಿ ಇಸ್ರೇಲ್ ಸೇನಾ ವಕ್ತಾರರು ತಿಳಿಸಿದ್ದಾರೆ.

ಹಮಾಸ್ ಹೋರಾಟಗಾರರು ಮರು ಸಂಘಟಿತರಾಗುವುದ್ನು ಹಾಗೂ ದಾಳಿಗಳನ್ನು ನಡೆಸುವುದನ್ನು ತಡೆಯುವ ಉದ್ದೇಶದಿಂದ ಉತ್ತರ ಗಾಝಾದ ಮೇಲೆ ದಾಳಿ ಕಾರ್ಯಾಚರಣೆಗಳನ್ನು ನಡೆಸುತ್ತಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ.

2023ರ ಆಕ್ಟೋಬರ್ 7ರ ಆನಂತರ ಗಾಝಾದ ಮೇಲೆ ಇಸ್ರೇಲ್ ನಡೆಸಿದ ಭೀಕರ ದಾಳಿಗಳಲ್ಲಿ ಈವರೆಗೆ 44 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ 1.04 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News