ಗಾಝಾ ಸಂಘರ್ಷ: ಯುದ್ಧಾಪರಾಧ ತನಿಖೆಗೆ ವಿಶ್ವಸಂಸ್ಥೆ ಪ್ರತಿನಿಧಿಗಳ ಆಗ್ರಹ

Update: 2023-11-27 16:44 GMT

ಸಾಂದರ್ಭಿಕ ಚಿತ್ರ | Photo : NDTV 

ನ್ಯೂಯಾರ್ಕ್: ಅಕ್ಟೋಬರ್ 7ರಿಂದ ಇಸ್ರೇಲ್ ಮತ್ತು ಫೆಲೆಸ್ತೀನ್ ಪ್ರದೇಶಗಳಲ್ಲಿ ನಡೆದಿದೆ ಎಂದು ಆರೋಪಿಸಲಾದ ಯುದ್ಧಾಪರಾಧ ಹಾಗೂ ಮಾನವೀಯತೆಯ ವಿರುದ್ಧದ ಅಪರಾಧ ಕೃತ್ಯಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ವಿಶ್ವಸಂಸ್ಥೆ ಮಾನವಹಕ್ಕುಗಳ ತಜ್ಞರು ಸೋಮವಾರ ಆಗ್ರಹಿಸಿದ್ದಾರೆ.

ಯುದ್ಧಾಪರಾಧಗಳು ಹಾಗೂ ಮಾನವೀಯತೆಯ ವಿರುದ್ಧದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ತ್ವರಿತ, ಪಾರದರ್ಶಕ ಮತ್ತು ಸ್ವತಂತ್ರ ತನಿಖೆ ನಡೆದು ಹೊಣೆಗಾರಿಕೆಯನ್ನು ಗೊತ್ತುಪಡಿಸುವ ಅಗತ್ಯವಿದೆ ಎಂದು ಕಾನೂನುಬಾಹಿರ ಹತ್ಯೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಮೋರಿಸ್ ಟಿಡ್ಬಾಲ್ ಬಿಂಝ್ ಮತ್ತು ಕಿರುಕುಳ, ಹಿಂಸೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಆಲಿಸ್ ಜಿಲ್ ಎಡ್ವಡ್ರ್ಸ್ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಸಂಘರ್ಷದಲ್ಲಿ ಎಲ್ಲಾ ಪಕ್ಷಗಳೂ ಮಾಡಿದ ಅಪರಾಧಗಳ ಬಗ್ಗೆ ತ್ವರಿತ, ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆಗಳನ್ನು ನಡೆಸಲು ಸ್ವತಂತ್ರ ತನಿಖಾಧಿಕಾರಿಗಳಿಗೆ ಅಗತ್ಯದ ಸಂಪನ್ಮೂಲಗಳನ್ನು ಒದಗಿಸಬೇಕು. ಯುದ್ಧಾಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ತನಿಖೆಯ ಜತೆಗೆ ಸಾಮೂಹಿಕ ಅಥವಾ ಕಾನೂನುಬಾಹಿರ ಹತ್ಯೆ, ಚಿತ್ರಹಿಂಸೆ ಅಥವಾ ಮಾನವ ಘನತೆಯ ಮೇಲಿನ ಇತರ ದೌರ್ಜನ್ಯಗಳನ್ನು ತನಿಖೆ ನಡೆಸುವುದು ಮೂಲಭೂತ ಕಾನೂನು ಭಾದ್ಯತೆಯಾಗಿದೆ ಎಂದು ಹೇಳಿಕೆ ತಿಳಿಸಿದೆ.

ಅತ್ಯಂತ ಗಂಭೀರ ಹಕ್ಕು ಉಲ್ಲಂಘನೆಗಳಿಗೆ ಕಾರಣವಾದ ಎಲ್ಲರನ್ನೂ -ವಿಶೇಷವಾಗಿ ಆದೇಶ ನೀಡುವ ಜವಾಬ್ದಾರಿಯನ್ನು ಹೊಂದಿರುವವರನ್ನು ಶೀಘ್ರವಾಗಿ ನ್ಯಾಯಾಂಗದ ಕಟಕಟೆಗೆ ತರುವುದನ್ನು ಅಂತರಾಷ್ಟ್ರೀಯ ಸಮುದಾಯ ಖಚಿತಪಡಿಸಿಕೊಳ್ಳಬೇಕು. ಯುದ್ಧಾಪರಾಧಗಳು ಹಾಗೂ ಮಾನವೀಯತೆಯ ವಿರುದ್ಧದ ಅಪರಾಧಗಳು ಸಾರ್ವತ್ರಿಕ ನ್ಯಾಯವ್ಯಾಪ್ತಿಯಡಿ ಬರುವುದರಿಂದ ಇಲ್ಲಿ ಕಾನೂನು ಮಿತಿ ಎಂಬುದಿಲ್ಲ. ಅಂದರೆ ಯಾವುದೇ ದೇಶದ ನ್ಯಾಯಾಲಯಗಳು ಹೊಣೆಗಾರರನ್ನು ಅವರ ರಾಷ್ಟ್ರೀಯತೆ ಮತ್ತು ಅಪರಾಧ ನಡೆಸಿದ ದೇಶವನ್ನು ಲೆಕ್ಕಿಸದೆ ಕಾನೂನು ಕ್ರಮ ಜರಗಿಸಬಹುದು ಎಂದು ಜಂಟಿ ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

ಪ್ರಮುಖ ಶಂಕಿತ ಅಪರಾಧಿಗಳನ್ನು ಗುರುತಿಸುವಲ್ಲಿ ಮತ್ತು ಪರಸ್ಪರ ಕಾನೂನು ನೆರವಿನ ಸಿದ್ಧಾಂತದ ಮೂಲಕ ಕಾನೂನು ಕ್ರಮಗಳನ್ನು ಜರಗಿಸಲು ಎಲ್ಲಾ ದೇಶಗಳೂ ಕ್ರಿಯಾಶೀಲ ಪಾತ್ರವನ್ನು ನಿರ್ವಹಿಸಬೇಕಾಗಿದೆ ಎಂದವರು ಹೇಳಿದ್ದಾರೆ.

ಸ್ವತಂತ್ರ ತಜ್ಞ ಪ್ರತಿನಿಧಿಗಳನ್ನು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ನೇಮಕಗೊಳಿಸುತ್ತದೆ. ಆದರೆ ವಿಶ್ವಸಂಸ್ಥೆಗೆ ಸಂಬಂಧಿಸಿ ಅಧಿಕೃತ ಹೇಳಿಕೆ ನೀಡಲು ಇವರಿಗೆ ಅಧಿಕಾರವಿಲ್ಲ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1,200 ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿದ್ದು ಇದಕ್ಕೆ ಪ್ರತಿಯಾಗಿ ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಸುಮಾರು 15,000 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News