ಮಾತುಕತೆಗೆ ಸಿದ್ಧ, ಆದರೆ ಹೊಸ ಒಪ್ಪಂದವಿಲ್ಲ: ಹಮಾಸ್

Update: 2025-03-19 20:50 IST
ಮಾತುಕತೆಗೆ ಸಿದ್ಧ, ಆದರೆ ಹೊಸ ಒಪ್ಪಂದವಿಲ್ಲ: ಹಮಾಸ್

ಸಾಂದರ್ಭಿಕ ಚಿತ್ರ | PC : NDTV

  • whatsapp icon

ಗಾಝಾ: ಗಾಝಾದ ಮೇಲೆ ಇಸ್ರೇಲ್‌ ನ ಭೀಕರ ಬಾಂಬ್ ದಾಳಿಯ ಬಳಿಕ ಹೇಳಿಕೆ ನೀಡಿರುವ ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪು ಮಾತುಕತೆಗೆ ತಾನು ಮುಕ್ತ ಎಂದಿದೆ. ಇದೇ ವೇಳೆ ಗಾಝಾ ಕದನ ವಿರಾಮ ಒಪ್ಪಂದವನ್ನು ಜಾರಿಗೊಳಿಸುವಂತೆ ಇಸ್ರೇಲ್ ಮೇಲೆ ಅಂತರಾಷ್ಟ್ರೀಯ ಸಮುದಾಯ ಒತ್ತಡ ಹೆಚ್ಚಿಸಬೇಕು ಎಂದು ಆಗ್ರಹಿಸಿದೆ.

ಮಂಗಳವಾರ ಗಾಝಾದ ಮೇಲೆ ಇಸ್ರೇಲ್ ನಡೆಸಿದ ಭೀಕರ ಬಾಂಬ್ ದಾಳಿಯಲ್ಲಿ 400ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದ್ದು ಬೃಹತ್ ಪ್ರಮಾಣದಲ್ಲಿ ನಾಗರಿಕ ಸಾವು-ನೋವಿನ ಬಗ್ಗೆ ವಿಶ್ವಸಂಸ್ಥೆ ಹಾಗೂ ವಿಶ್ವದಾದ್ಯಂತದ ದೇಶಗಳು ಖಂಡನೆ ವ್ಯಕ್ತಪಡಿಸಿವೆ.

ಕದನ ವಿರಾಮ ಒಪ್ಪಂದವನ್ನು ಮರಳಿ ಹಳಿಗೆ ತರುವ ಉದ್ದೇಶದಿಂದ ಹಮಾಸ್ ಮಾತುಕತೆಗೆ ಮುಕ್ತವಾಗಿದೆ. ಆದರೆ ಜನವರಿ 19ರಂದು ಜಾರಿಗೆ ಬಂದಿರುವ ಒಪ್ಪಂದದ ಬಗ್ಗೆ ಮರು ಚರ್ಚೆಗೆ ಸಿದ್ಧವಿಲ್ಲ. ಮಾತುಕತೆಗೆ ಎಂದಿಗೂ ನಮ್ಮ ಬಾಗಿಲನ್ನು ಮುಚ್ಚುವುದಿಲ್ಲ. ಆದರೆ ಹೊಸ ಒಪ್ಪಂದದ ಅಗತ್ಯವಿಲ್ಲ. ಯಾಕೆಂದರೆ ಹಾಲಿ ಒಪ್ಪಂದಕ್ಕೆ ಎಲ್ಲಾ ಕಡೆಯವರೂ ಸಹಿ ಹಾಕಿದ್ದಾರೆ ಎಂದು ಹಮಾಸ್‍ನ ವರಿಷ್ಠ ತಾಹಿರ್ ಅಲ್-ನುನು ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ನಾವು ಯಾವುದೇ ಷರತ್ತುಗಳನ್ನು ಮುಂದಿರಿಸುವುದಿಲ್ಲ. ಆದರೆ ಆಕ್ರಮಣಕಾರರು(ಇಸ್ರೇಲ್) ತಮ್ಮ ದಾಳಿಗಳನ್ನು ಮತ್ತು ಸಂಪೂರ್ಣ ವಿನಾಶಗೊಳಿಸುವ ಉದ್ದೇಶದ ಯುದ್ಧವನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಬೇಕು. ಎರಡನೇ ಹಂತದ ಮಾತುಕತೆ ಆರಂಭಗೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದವರು ಹೇಳಿದ್ದಾರೆ.

ಜನವರಿ 19ರಂದು ಜಾರಿಗೆ ಬಂದಿರುವ ಕದನ ವಿರಾಮದ ಪ್ರಥಮ ಹಂತ ಮಾರ್ಚ್ ಪ್ರಥಮ ವಾರ ಅಂತ್ಯಗೊಂಡಿದೆ. ಎರಡನೇ ಹಂತದ ಬಗ್ಗೆ ಚರ್ಚಿಸುವ ಬದಲು ಪ್ರಥಮ ಹಂತವನ್ನು ವಿಸ್ತರಿಸಬೇಕೆಂಬುದು ಅಮೆರಿಕ ಮತ್ತು ಇಸ್ರೇಲ್‌ ನ ನಿಲುವಾಗಿದ್ದು ಇದನ್ನು ಹಮಾಸ್ ಒಪ್ಪಿಲ್ಲ. ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಇಚ್ಛಿಸದ ಕಾರಣ ಹಮಾಸ್ ಪ್ರಥಮ ಹಂತದ ವಿಸ್ತರಣೆಯನ್ನು ವಿರೋಧಿಸುತ್ತಿದೆ ಎಂದು ಇಸ್ರೇಲ್ ಪ್ರತಿಪಾದಿಸಿದೆ. ಇಸ್ರೇಲ್‌ ನ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಹಮಾಸ್ ಪದೇ ಪದೇ ನಿರಾಕರಿಸಿದ್ದರಿಂದ ಗಾಝಾದ ಮೇಲೆ ದಾಳಿ ಮರು ಆರಂಭಿಸಲು ಇಸ್ರೇಲ್ ಪ್ರಧಾನಿ ಆದೇಶಿಸಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಸಂಕಷ್ಟ ಕೊನೆಯಾಗಬಹುದು ಎಂಬ ಇಸ್ರೇಲಿಯನ್ನರು ಹಾಗೂ ಫೆಲೆಸ್ತೀನೀಯರ ಭರವಸೆಗಳನ್ನು ಗಾಝಾದ ಮೇಲಿನ ಇಸ್ರೇಲ್ ದಾಳಿಯು ನುಚ್ಚುನೂರಾಗಿಸಿದೆ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲಿನ ಬಾರ್ಬೊಕ್ ಹೇಳಿದ್ದಾರೆ. ಗಾಝಾದ ಮೇಲಿನ ಹೊಸ ಆಕ್ರಮಣವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾ'ರ್‍ಗೆ ಸ್ಪಷ್ಟಪಡಿಸಿರುವುದಾಗಿ ಯುರೋಪಿಯನ್ ಯೂನಿಯನ್ ವಿದೇಶಾಂಗ ಕಾರ್ಯನೀತಿ ಮುಖ್ಯಸ್ಥೆ ಕಾಜ ಕಲ್ಲಾಸ್ ಹೇಳಿದ್ದಾರೆ. ಗಾಝಾ ಕದನ ವಿರಾಮ ಒಪ್ಪಂದಕ್ಕೆ ಅಮೆರಿಕದ ಜೊತೆ ಮಧ್ಯಸ್ಥಿಕೆ ವಹಿಸಿದ್ದ ಈಜಿಪ್ಟ್ ಮತ್ತು ಖತರ್ ಕೂಡಾ ಇಸ್ರೇಲ್‌ ನ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿವೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News