ಶಾಶ್ವತ ಕದನ ವಿರಾಮಕ್ಕೆ ಹಮಾಸ್ ಆಗ್ರಹ
ಗಾಝಾ : ಗಾಝಾದಲ್ಲಿ ಶಾಶ್ವತ ಕದನ ವಿರಾಮ ಮತ್ತು ಗಾಝಾ ಪಟ್ಟಿಯಿಂದ ತನ್ನ ಪಡೆಗಳನ್ನು ಸಂಪೂರ್ಣ ಹಿಂಪಡೆಯುವುದಾಗಿ ಇಸ್ರೇಲ್ ಸ್ಪಷ್ಟವಾಗಿ ಒಪ್ಪಿದರೆ ಮಾತ್ರ ಯಾವುದೇ ಕದನವಿರಾಮಕ್ಕೆ ತಾನು ಸಮ್ಮತಿಸುವುದಾಗಿ ಹಮಾಸ್‍ನ ಉನ್ನತ ಮುಖಂಡರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಇಸ್ರೇಲ್-ಹಮಾಸ್ ನಡುವೆ ಮೂರು ಹಂತದ ಕದನ ವಿರಾಮ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಬೈಡನ್ ಮುಂದಿರಿಸಿದ್ದರು. ಇದರಲ್ಲಿ ಪ್ರಥಮ ಹಂತದಲ್ಲಿ ಹಮಾಸ್ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು ಮತ್ತು ಪ್ರತಿಯಾಗಿ ಇಸ್ರೇಲ್ ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸಬೇಕು ಎಂಬ ಅಂಶವಿದೆ.
ಇಸ್ರೇಲ್ ಕೇವಲ ಪ್ರಥಮ ಹಂತವನ್ನು ಮಾತ್ರ ಬಯಸಿದೆ. ಎಲ್ಲಾ ಒತ್ತೆಯಾಳುಗಳೂ ಬಿಡುಗಡೆಗೊಂಡರೆ ತಕ್ಷಣ ನಮ್ಮ ಜನರ ಮೇಲಿನ ಆಕ್ರಮಣವನ್ನು ಪುನರಾರಂಭಿಸಲಿದೆ. ಆದ್ದರಿಂದ ಇಸ್ರೇಲ್‍ನಿಂದ ಸ್ಪಷ್ಟ ಬದ್ಧತೆಯನ್ನು ಪಡೆಯುವಂತೆ ಮಧ್ಯಸ್ಥಿಕೆ ವಹಿಸಿದ ದೇಶಗಳನ್ನು ಆಗ್ರಹಿಸಿದ್ದೇವೆ ಎಂದು ಹಮಾಸ್‍ನ ಉನ್ನತ ಮುಖಂಡ ಒಸಾಮಾ ಹಮ್ದನ್ ಹೇಳಿದ್ದಾರೆ.