ಅಮೆರಿಕಕ್ಕೆ ಭೇಟಿ ನೀಡುವಾಗ ಸುರಕ್ಷತಾ ಮುನ್ನೆಚ್ಚರಿಕೆ ವಹಿಸಿ | ಪ್ರಜೆಗಳಿಗೆ ಪ್ರಯಾಣ ಸಲಹೆ ನೀಡಿದ ಚೀನಾ
ಬೀಜಿಂಗ್: ಕಿರುಕುಳ ಮತ್ತು ಅನಗತ್ಯ ವಿಚಾರಣೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಅಮೆರಿಕಕ್ಕೆ ಭೇಟಿ ನೀಡುವಾಗ ಸುರಕ್ಷಕಾ ಮುನ್ನೆಚ್ಚರಿಕೆ ವಹಿಸುವಂತೆ ತನ್ನ ಪ್ರಜೆಗಳಿಗೆ ಚೀನಾ ಪ್ರಯಾಣ ಸಲಹೆ ಜಾರಿಗೊಳಿಸಿದೆ.
ಚೀನೀ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಅಮೆರಿಕದಲ್ಲಿ ಅನಗತ್ಯ ವಿಚಾರಣೆ ಮತ್ತು ಕಿರುಕುಳಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಲಹೆ ಜಾರಿಗೊಳಿಸಿರುವುದಾಗಿ ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.
ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಚೀನಾ ಪ್ರಜೆಗಳನ್ನು ಕೂಲಂಕುಷ ತಪಾಸಣೆಗೆ ಒಳಪಡಿಸಲಾಗುತ್ತಿದ್ದು ಕೆಲವರನ್ನು ಅಮೆರಿಕ ಪ್ರವೇಶಿಸುವುದಕ್ಕೆ ನಿಷೇಧಿಸಲಾಗಿದೆ . ನವೆಂಬರ್ನಿಂದ ಕನಿಷ್ಟ 8 ವಿದ್ಯಾರ್ಥಿಗಳು ಕ್ರಮಬದ್ದ ದಾಖಲೆಪತ್ರಗಳಿದ್ದರೂ ವಾಷಿಂಗ್ಟನ್ನ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ರೀತಿಯ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಇಲಾಖೆ ಹೇಳಿದೆ.
ಜನವರಿಯಲ್ಲಿ ಚೀನಾದ ಪಿಎಚ್ಡಿ ವಿದ್ಯಾರ್ಥಿಯೊಬ್ಬನನ್ನು ಡಲ್ಲೆಸ್ ವಿಮಾನ ನಿಲ್ದಾಣದಲ್ಲಿ ಕೂಲಂಕುಷ ದೈಹಿಕ ತಪಾಸಣೆ, ಸುದೀರ್ಘ ವಿಚಾರಣೆ ಹಾಗೂ ಏಕಾಂತ ಬಂಧನದ ಬಳಿಕ ಚೀನಾಕ್ಕೆ ಗಡೀಪಾರು ಮಾಡಲಾಗಿದೆ. ಚೀನಾದ ಸ್ಕಾಲರ್ಷಿಪ್ ಕೌನ್ಸಿಲ್ನಿಂದ ವಿದ್ಯಾರ್ಥಿವೇತನ ಪಡೆದು ಖಾಸಗಿ ಸಂಶೋಧನೆ( ಸಂಶೋಧನೆಯ ವಿವರಗಳನ್ನು ಪ್ರಕಟಿಸದೆ ಗೌಪ್ಯವಾಗಿಡುವ) ನಡೆಸುವ ವಿದ್ಯಾರ್ಥಿಗಳು ಈ ಪ್ರಕ್ರಿಯೆಯ ಪ್ರಧಾನ ಗುರಿಯಾಗಿದ್ದಾರೆ ಎಂದು `ದಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ಪತ್ರಿಕೆ ವರದಿ ಮಾಡಿದೆ. ಅಮೆರಿಕ ಅಧಿಕಾರಿಗಳ ಈ ಕೃತ್ಯವನ್ನು ಚೀನಾದ ಅಧಿಕಾರಿಗಳು ಖಂಡಿಸಿದ್ದು ಇವು `ಶೀತಲ ಯುದ್ಧದ ಮನಸ್ಥಿತಿಯಾಗಿದೆ' ಮತ್ತು ಅಮೆರಿಕವು ಎರಡು ರಾಷ್ಟ್ರಗಳ ನಡುವಿನ ಸಿಬಂದಿ ವಿನಿಮಯವನ್ನು ಅಡ್ಡಿಪಡಿಸುತ್ತಿದೆ ಎಂದು ಟೀಕಿಸಿದ್ದಾರೆ. ಅಮೆರಿಕವು ಶೈಕ್ಷಣಿಕ ಸಂಶೋಧನೆಯನ್ನು ರಾಜಕೀಯಗೊಳಿಸುತ್ತಿದೆ ಮತ್ತು ಚೀನೀ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದೆ. ಇದು ರಾಜಕೀಯ ಮತ್ತು ತಾರತಮ್ಯದ ಕಾನೂನು ಕ್ರಮ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್ ಆರೋಪಿಸಿದ್ದಾರೆ.
ಅಮೆರಿಕದೊಂದಿಗಿನ ದ್ವಿಪಕ್ಷೀಯ ಉದ್ವಿಗ್ನತೆಯ ಹೊರತಾಗಿಯೂ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಕ್ಕೆ ತನ್ನ ಬದ್ಧತೆಯನ್ನು ಚೀನಾದ ಸರಕಾರ ಪುನರುಚ್ಚರಿಸಿದ್ದು ಮುಂದಿನ 5 ವರ್ಷಗಳಲ್ಲಿ ಚೀನಾದಲ್ಲಿ ಅಧ್ಯಯನ ನಡೆಸಲು 50,000 ಯುವ ಅಮೆರಿಕನ್ನರನ್ನು ಆಹ್ವಾನಿಸುವ ಯೋಜನೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಘೋಷಿಸಿದ್ದಾರೆ. ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿದ್ದ ಅಮೆರಿಕದ ಶೈಕ್ಷಣಿಕ, ರಾಜಕೀಯ ಮತ್ತು ವ್ಯಾಪಾರ ಸಮುದಾಯದ ಪ್ರತಿನಿಧಿಗಳ ಜತೆಗಿನ ಸಭೆಯಲ್ಲಿ ಚೀನಾ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳ ಮಹತ್ವವನ್ನು ಒತ್ತಿಹೇಳಿದ್ದ ಕ್ಸಿ, ದ್ವಿಪಕ್ಷೀಯ ವಿನಿಮಯ ಪ್ರಕ್ರಿಯೆ ಹೆಚ್ಚುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಅಮೆರಿಕದ ಉದ್ಯಮಿ ಸ್ಟೀಫನ್ ಶ್ವಾರ್ಜ್ಮನ್ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ಹೇಳಿಕೆಯನ್ನು ಪುನರುಚ್ಚರಿಸಿದ್ದ ಚೀನಾದ ಶಿಕ್ಷಣ ಸಚಿವ ಹುವಾಯ್ ಜಿನ್ಪೆಂಗ್, ವಿದ್ಯಾರ್ಥಿ ವಿನಿಮಯವನ್ನು ಹೆಚ್ಚಿಸುವ ಮತ್ತು ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಸಹಕಾರವನ್ನು ಹೆಚ್ಚಿಸುವ ಅಗತ್ಯವನ್ನು ಪ್ರತಿಪಾದಿಸಿದ್ದರು.