ಹಾಂಕಾಂಗ್: ರಾಷ್ಟ್ರೀಯ ಭದ್ರತಾ ಕಾಯ್ದೆ ಉಲ್ಲಂಘಿಸಿದ 6 ಮಂದಿಯ ಬಂಧನ
ಹಾಂಕಾಂಗ್: ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಲ್ಲಿ 6 ಮಂದಿಯನ್ನು ಬಂಧಿಸಿರುವುದಾಗಿ ಹಾಂಕಾಂಗ್ ಪೊಲೀಸರು ಹೇಳಿದ್ದಾರೆ.
ಮಹಿಳೆ ಹಾಗೂ ಇತರ 5 ಮಂದಿ ಸಾಮಾಜಿಕ ಮಾಧ್ಯಮದಲ್ಲಿ ಅನಾಮಧೇಯವಾಗಿ ದೇಶದ್ರೋಹದ ಹೇಳಿಕೆ, ವರದಿ ಪ್ರಕಟಿಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಕೇಂದ್ರ ಸರಕಾರ(ಚೀನಾ ಸರಕಾರ), ಹಾಂಕಾಂಗ್ ಸರಕಾರ ಮತ್ತು ನಗರದ ನ್ಯಾಯಾಂಗ ಸಂಸ್ಥೆಗಳ ವಿರುದ್ಧ ದ್ವೇಷಕ್ಕೆ ಪ್ರಚೋದನೆ ನೀಡುವ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಆಯೋಜಿಸುವಂತೆ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಉತ್ತೇಜಿಸುವ ಉದ್ದೇಶದ ಕೃತ್ಯಗಳಲ್ಲಿ ಇವರು ತೊಡಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮಾರ್ಚ್‍ನಲ್ಲಿ ಜಾರಿಗೆ ಬಂದಿರುವ , ಸ್ಥಳೀಯವಾಗಿ ಆರ್ಟಿಕಲ್ 23 ಎಂದು ಕರೆಯಲ್ಪಡುವ ಈ ಕಾಯ್ದೆಯು ತನ್ನ ಆಡಳಿತಕ್ಕೆ ಭವಿಷ್ಯದ ಸವಾಲುಗಳನ್ನು ಎದುರಿಸಲು, ದೇಶದ್ರೋಹ ಮತ್ತು ದಂಗೆಗೆ ಜೀವಾವಧಿ ಶಿಕ್ಷೆ ವಿಧಿಸಲು ಸರಕಾರಕ್ಕೆ ಹೆಚ್ಚಿನ ಅಧಿಕಾರ ನೀಡುತ್ತದೆ. ಚೀನಾ ಜಾರಿಗೊಳಿಸಿರುವ ಕಾಯ್ದೆಯು ಸ್ಥಿರತೆ ನೆಲೆಸಲು ನೆರವಾಗಲಿದೆ ಎಂದು ಹಾಂಕಾಂಗ್ ಮತ್ತು ಚೀನಾ ಸರಕಾರಗಳು ಪ್ರತಿಪಾದಿಸಿವೆ. 1997ರಲ್ಲಿ ಬ್ರಿಟನ್ ಹಾಂಕಾಂಗ್ ಅನ್ನು ಚೀನಾಕ್ಕೆ ಮರಳಿಸಿದೆ.