ಇಸ್ರೇಲ್ ವಿಮಾನ ನಿಲ್ದಾಣದ ಮೇಲೆ ಹೌದಿಗಳ ಹೈಪರ್‍ಸಾನಿಕ್ ಕ್ಷಿಪಣಿ ದಾಳಿ

ಸಾಂದರ್ಭಿಕ ಚಿತ್ರ | PTI
ಟೆಲ್‍ಅವೀವ್: ಮಧ್ಯ ಇಸ್ರೇಲ್ ನ ಬೆನ್ ಗ್ಯುರಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮತ್ತು ಕೆಂಪು ಸಮುದ್ರದಲ್ಲಿ ಅಮೆರಿಕದ ವಿಮಾನ ವಾಹಕ ಸಮರನೌಕೆಯನ್ನು ಗುರಿಯಾಗಿಸಿ ಗುರುವಾರ ಹೈಪರ್‍ಸಾನಿಕ್ ಕ್ಷಿಪಣಿಯನ್ನು ಪ್ರಯೋಗಿಸಿರುವುದಾಗಿ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಹೇಳಿದ್ದಾರೆ.
ಹೈಪರ್‍ಸಾನಿಕ್ ಕ್ಷಿಪಣಿಯು ಬೆನ್ ಗ್ಯುರಿಯಾನ್ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿದೆ ಎಂದು ಹೌದಿಗಳ ವಕ್ತಾರ ಯಾಹ್ಯಾ ಸಾರಿ ಪ್ರತಿಪಾದಿಸಿದ್ದಾರೆ. ಆದರೆ ಇದನ್ನು ಇಸ್ರೇಲ್ ನಿರಾಕರಿಸಿದ್ದು ಯೆಮನ್‍ನಿಂದ ಪ್ರಯೋಗಿಸಲಾದ ಕ್ಷಿಪಣಿಯು ಇಸ್ರೇಲ್ ಭೂಪ್ರದೇಶವನ್ನು ಪ್ರವೇಶಿಸುವ ಮುನ್ನವೇ ಅದನ್ನು ಹೊಡೆದುರುಳಿಸಲಾಗಿದೆ. ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಈ ಮಧ್ಯೆ, ಬುಧವಾರ ಯೆಮನ್‍ನಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಕಳೆದ ಶನಿವಾರದಿಂದ ಅಮೆರಿಕ ನಡೆಸುತ್ತಿರುವ ದಾಳಿಯಲ್ಲಿ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು ಸುಮಾರು 30 ಮಂದಿ ಗಾಯಗೊಂಡಿದ್ದಾರೆ ಎಂದು ಹೌದಿ ಮೂಲಗಳು ಹೇಳಿವೆ.