ಹಮಾಸ್ ನಾಯಕ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ಧ ಬಂಧನ ವಾರಂಟ್‌ ಗೆ ಆಗ್ರಹ

Update: 2024-05-20 14:23 GMT

                                           ಯಾಹ್ಯಾ ಸಿನ್ವಾರ್(PC: X \ @NiohBerg) , ಬೆಂಜಮಿನ್ ನೆತನ್ಯಾಹು(PC: X \ NDTV)

ಹೇಗ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಇಸ್ರೇಲ್ ಹಾಗೂ ಹಮಾಸ್ನ ಉನ್ನತ ಮುಖಂಡರ ಬಂಧನ ವಾರಂಟ್ ಜಾರಿಗೆ ಕೋರುವುದಾಗಿ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ(ಐಸಿಸಿ)ದ ಮುಖ್ಯ ಅಭಿಯೋಜಕ(ಪ್ರಾಸಿಕ್ಯೂಟರ್) ಕರೀಮ್ ಖಾನ್ ಹೇಳಿದ್ದಾರೆ.

ಏಳು ತಿಂಗಳಿಂದ ಮುಂದುವರಿದಿರುವ ಗಾಝಾ ಸಂಘರ್ಷದಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು, ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್, ಹಮಾಸ್ ಮುಖಂಡರಾದ ಯಾಹಿಯಾ ಸಿನ್ವರ್, ಮುಹಮ್ಮದ್ ದೆಯಿಫ್ ಮತ್ತು ಇಸ್ಮಾಯಿಲ್ ಹನಿಯೆಹ್ ಅವರ ಕೃತ್ಯಗಳು ಮಾನವೀಯತೆಯ ವಿರುದ್ಧದ ಅಪರಾಧವಾಗಿದ್ದು ಯುದ್ಧಾಪರಾಧಕ್ಕೆ ಇವರನ್ನು ಹೊಣೆಯಾಗಿಸಬೇಕು ಎಂದವರು ಆಗ್ರಹಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಉಪವಾಸ ಕೆಡಹುವುದನ್ನು ಯುದ್ಧತಂತ್ರದ ವಿಧಾನವಾಗಿ ಬಳಸಿರುವುದು, ಗಾಝಾದ ನಾಗರಿಕ ಸಮುದಾಯದ ವಿರುದ್ಧ ಸಾಮೂಹಿಕ ಶಿಕ್ಷೆಯ ಪ್ರಕರಣಗಳು ವ್ಯಾಪಕವಾಗಿದ್ದವು ಮತ್ತು ಇದನ್ನು ಸ್ಪಷ್ಟವಾಗಿ ಗಮನಿಸಲಾಗಿದೆ. ಅಪೌಷ್ಟಿಕತೆ, ನಿರ್ಜಲೀಕರಣ ಮುಂತಾದ ಸಮಸ್ಯೆಗಳಿಂದ ಶಿಶುಗಳು, ಮಕ್ಕಳು, ಮಹಿಳೆಯರು ಸೇರಿದಂತೆ ಫೆಲೆಸ್ತೀನ್ ಸಮುದಾಯ ವ್ಯಾಪಕ ಸಾವು-ನೋವನ್ನು ಅನುಭವಿಸಿದೆ ಎಂದು ಖಾನ್ ಹೇಳಿದ್ದಾರೆ. ಡಿಸೆಂಬರ್‌ ನಲ್ಲಿ ಗಾಝಾಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಖಾನ್ , ಅಕ್ಟೋಬರ್ 7ರಂದು ಹಮಾಸ್ ನಡೆಸಿದ್ದ ದಾಳಿಯನ್ನು ಖಂಡಿಸಿದ್ದಾರೆ. `ಈ ದಾಳಿಯ ವಿನಾಶಕಾರಿ ದೃಶ್ಯಗಳು ಮತ್ತು ಪ್ರಜ್ಞೆಯಿಲ್ಲದ ಅಪರಾಧ, ಕ್ರೌರ್ಯಗಳ ಬಗ್ಗೆ ಸಂತ್ರಸ್ತರಿಂದ ಮಾಹಿತಿ ಪಡೆದಿದ್ದೇನೆ. ಇಂತಹ ಕೃತ್ಯಗಳಿಗೆ ಹೊಣೆಗಾರರನ್ನು ಗುರುತಿಸಬೇಕು' ಎಂದವರು ಒತ್ತಾಯಿಸಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ಮುಖಂಡರನ್ನು ವಿಚಾರಣೆಗೆ ಒಳಪಡಿಸಬೇಕಿದ್ದರೆ ಮುಖ್ಯ ಅಭಿಯೋಜಕರು ಐಸಿಸಿಯ ಮೂವರು ನ್ಯಾಯಾಧೀಶರ ತನಿಖಾ ಸಮಿತಿಯಿಂದ ಬಂಧನ ವಾರಂಟ್ ಪಡೆಯಬೇಕಿದೆ. ಪುರಾವೆಗಳನ್ನು ಪರಿಶೀಲಿಸಿ, ವಿಚಾರಣಾ ಪ್ರಕ್ರಿಯೆ ಮುಂದುವರಿಯಬೇಕೇ ಎಂಬುದನ್ನು ನಿರ್ಧರಿಸಲು ಸುಮಾರು 2 ತಿಂಗಳು ಬೇಕಾಗುತ್ತದೆ.

ತಕ್ಷಣ ವಿಚಾರಣೆಯ ಅಪಾಯವಿಲ್ಲ

ಇಸ್ರೇಲ್ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ)ಯ ಸದಸ್ಯನಲ್ಲ. ಆದ್ದರಿಂದ ಒಂದು ವೇಳೆ ಐಸಿಸಿ ಬಂಧನ ವಾರಂಟ್ ಜಾರಿಗೊಳಿಸಿದರೂ, ನೆತನ್ಯಾಹು ಮತ್ತು ಗ್ಯಾಲಂಟ್ ತಕ್ಷಣ ವಿಚಾರಣೆಯ ಅಪಾಯವನ್ನು ಎದುರಿಸುವುದಿಲ್ಲ. ಆದರೆ, ಬಂಧನ ವಾರಂಟ್ ಜಾರಿಯಾದರೆ ಈ ಮುಖಂಡರ ಅಂತರಾಷ್ಟ್ರೀಯ ಪ್ರಯಾಣವನ್ನು ಸಂಕೀರ್ಣಗೊಳಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News