ಜೈಲಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ 129 ಮಂದಿ ಮೃತ್ಯು
ಕಿನ್ಷಾಸ : ಕಾಂಗೋ ಗಣರಾಜ್ಯದ ರಾಜಧಾನಿ ಕಿನ್ಷಾಸದ ಪ್ರಧಾನ ಜೈಲಿನಲ್ಲಿ ಜೈಲಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ 129 ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಘಟನೆಯಲ್ಲಿ ಹೆಚ್ಚಿನವರು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಕಿನ್ಷಾಸದ ಮಕಾಲ ಸೆಂಟ್ರಲ್ ಜೈಲಿನಲ್ಲಿ ಸಾಮರ್ಥ್ಯ ಮೀರಿ ಕೈದಿಗಳನ್ನು ಇರಿಸಲಾಗಿದೆ. ಕೆಲವು ಕೈದಿಗಳು ಸೋಮವಾರ ತಪ್ಪಿಸಿಕೊಂಡು ಪರಾರಿಯಾಗುವ ಪ್ರಯತ್ನ ನಡೆಸಿದಾಗ ಜೈಲು ಅಧಿಕಾರಿಗಳು ಎಚ್ಚರಿಕೆ ನೀಡಲು ಹಾರಿಸಿದ ಗುಂಡೇಟಿನಿಂದ 24 ಕೈದಿಗಳು ಸಾವನ್ನಪ್ಪಿದ್ದಾರೆ.
59 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಪ್ರಕರಣವೂ ವರದಿಯಾಗಿದೆ. ಘರ್ಷಣೆಯ ಸಂದರ್ಭ ಜೈಲಿನ ಒಂದು ಭಾಗಕ್ಕೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಕಾಂಗೋದ ಆಂತರಿಕ ಸಚಿವ ಜಾಕ್ವೆಮಿನ್ ಶಬಾನಿ ಹೇಳಿದ್ದಾರೆ. ಒಟ್ಟು 129 ಮಂದಿ ಮೃತಪಟ್ಟಿದ್ದಾರೆ ಎಂದು ಸರಕಾರದ ಮೂಲಗಳು ಹೇಳಿದ್ದು ಹೆಚ್ಚಿನ ವಿವರ ನೀಡಿಲ್ಲ.
ಜೈಲಿನ ಒಳಗೆ ರವಿವಾರ ಮಧ್ಯರಾತ್ರಿ ಆರಂಭಗೊಂಡ ಗುಂಡಿನ ದಾಳಿ ಸೋಮವಾರ ಬೆಳಗ್ಗಿನವರೆಗೆ ಮುಂದುವರಿದಿದೆ. ಗಲಭೆ ಆರಂಭಗೊಂಡ ಕೆಲ ಹೊತ್ತಿನಲ್ಲೇ ಮಿಲಿಟರಿ ವಾಹನಗಳು ಧಾವಿಸಿದ್ದು ಜೈಲನ್ನು ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಮುಚ್ಚಲಾಗಿದೆ. ಜೈಲಿನ ಒಳಗೆ ನೆಲದ ಮೇಲೆ ಹಲವರು ಬಿದ್ದಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳು ಪೋಸ್ಟ್ ಮಾಡಿವೆ.
ಅಧ್ಯಕ್ಷರ ನಿವಾಸದಿಂದ 5 ಕಿ.ಮೀ ದೂರದಲ್ಲಿ ನಗರದ ಮಧ್ಯೆ ಇರುವ ಜೈಲಿಗೆ ಹೊರಗಿನ ವ್ಯಕ್ತಿಗಳು ನುಗ್ಗಿರುವ ಸಾಧ್ಯತೆಯಿಲ್ಲ. ಪರಾರಿಯಾಗುವ ಸಂಚನ್ನು ಕೈದಿಗಳು ಜೈಲಿನೊಳಗೇ ರೂಪಿಸಿದ್ದರು. ಘಟನೆಯ ಬಗ್ಗೆ ತನಿಖೆಗೆ ಸಮಿತಿಯನ್ನು ರಚಿಸಲಾಗಿದೆ ಎಂದು ನ್ಯಾಯ ಇಲಾಖೆಯ ಸಹಾಯಕ ಸಚಿವ ಎಂಬೆಂಬಾ ಕಬುಯಾರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸರಕಾರ ಅನಗತ್ಯ ಬಲ ಪ್ರಯೋಗಿಸಿರುವುದು ಬೃಹತ್ ಪ್ರಮಾಣದ ಸಾವುನೋವಿಗೆ ಕಾರಣವಾಗಿದೆ. ಮೃತರ ಸಂಖ್ಯೆ ಹೆಚ್ಚಿರುವ ಸಾಧ್ಯತೆಯಿದ್ದು ಸರಕಾರ ಮಾಹಿತಿಯನ್ನು ಮರೆಮಾಚುತ್ತಿದೆ. ಘಟನೆಯ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು ಎಂದು ಮಾನವ ಹಕ್ಕುಗಳ ಗುಂಪುಗಳು ಮತ್ತು ವಿಪಕ್ಷಗಳು ಆಗ್ರಹಿಸಿವೆ. ಜೈಲಿಂದ ಪರಾರಿಯಾಗುವ ಪ್ರಯತ್ನ ಪೂರ್ವಯೋಜಿತ ವಿಧ್ವಂಸಕ ಕೃತ್ಯವಾಗಿದ್ದು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯ ಇಲಾಖೆಯ ಸಚಿವ ಕಾನ್‍ಸ್ಟೆಂಟ್ ಮುತಂಬಾ ಹೇಳಿದ್ದು ನ್ಯಾಯಾಧೀಶರು ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಿ ಶಿಕ್ಷೆ ಪ್ರಕಟಿಸುವುದು ಜೈಲುಗಳು ಕೈದಿಗಳಿಂದ ತುಂಬಿ ತುಳುಕಲು ಕಾರಣ ಎಂದಿದ್ದಾರೆ.
►ಕಿಕ್ಕಿರಿದ ಕಾರಾಗೃಹಗಳು
ಕಾಂಗೋದ ಬಹುತೇಕ ಜೈಲುಗಳು ಅಪರಾಧಿಗಳಿಂದ ತುಂಬಿ ತುಳುಕುತ್ತಿದ್ದು ಮಕಾಲ ಸೇರಿದಂತೆ ಹೆಚ್ಚಿನ ಜೈಲುಗಳಲ್ಲಿ ಸಾಮರ್ಥ್ಯ ಮೀರಿ ಕೈದಿಗಳನ್ನು ಇರಿಸಲಾಗಿದ್ದು ಆಹಾರದ ಕೊರತೆಯಿಂದ ಕೈದಿಗಳು ಮೃತಪಟ್ಟಿರುವ ವರದಿಯಿದೆ. ಕಾರಾಗೃಹಗಳ ದಟ್ಟಣೆಯನ್ನು ಕಡಿಮೆ ಮಾಡಲು ಈ ವರ್ಷ ಹಲವಾರು ಕೈದಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಲಾಗಿದೆ.
ಕಾಂಗೋದ ಅತೀ ದೊಡ್ಡ ಜೈಲಾಗಿರುವ ಮಕಾಲದಲ್ಲಿ 1,500 ಕೈದಿಗಳನ್ನು ಇರಿಸಲು ಅವಕಾಶವಿದ್ದು 12,000ಕ್ಕೂ ಅಧಿಕ ಕೈದಿಗಳಿದ್ದಾರೆ ಎಂದು ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ವರದಿ ಮಾಡಿದೆ.