ಕೈಲಾಸ ಮಾನಸ ಸರೋವರ ಯಾತ್ರೆ, ನೇರ ವಿಮಾನ ಪುನಾರಂಭಕ್ಕೆ ಭಾರತ- ಚೀನಾ ಒಪ್ಪಿಗೆ

Update: 2025-01-28 08:50 IST
ಕೈಲಾಸ ಮಾನಸ ಸರೋವರ ಯಾತ್ರೆ, ನೇರ ವಿಮಾನ ಪುನಾರಂಭಕ್ಕೆ ಭಾರತ- ಚೀನಾ ಒಪ್ಪಿಗೆ

PC: x.com/TheSATimes

  • whatsapp icon

ಹೊಸದಿಲ್ಲಿ: ಪ್ರಸಕ್ತ ವರ್ಷದ ಬೇಸಿಗೆಯಿಂದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲು ಭಾರತ ಹಾಗೂ ಚೀನಾ ಪರಸ್ಪರ ಒಪ್ಪಿಕೊಂಡಿವೆ. ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಹಾಲಿ ಇರುವ ಒಪ್ಪಂದಗಳ ಅನ್ವಯ ಇದಕ್ಕೆ ಅಗತ್ಯವಾಗಿರುವ ಸೂಕ್ತ ವ್ಯವಸ್ಥೆಯನ್ನು ಚರ್ಚಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಜತೆಗೆ ಉಭಯ ದೇಶಗಳ ನಡುವೆ ನೇರ ವಿಮಾನಗಳನ್ನು ಪುನರಾರಂಭಿಸುವ ಬಗ್ಗೆಯೂ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಚೀನಾದ ವಿದೇಶಾಂಗ ಕಾರ್ಯದರ್ಶಿ- ಉಪ ವಿದೇಶಾಂಗ ಸಚಿವರನ್ನು ಬೀಜಿಂಗ್ ನಲ್ಲಿ ಭೇಟಿ ಮಾಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿಸ್ತೃತ ಚರ್ಚೆ ನಡೆಸಿದರು.

ಕಳೆದ ಅಕ್ಟೋಬರ್ ನಲ್ಲಿ ಕಝನ್ ನಲ್ಲಿ ನಡೆದ ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಅವರು ಒಪ್ಪಿಕೊಂಡ ಮೇರೆಗೆ ವಿಧಿವಿಧಾನಗಳನ್ನು ಅಂತಿಮಪಡಿಸಲು ಕಾರ್ಯದರ್ಶಿ ಮಟ್ಟದ ಮಾತುಕತೆ ನಡೆಯಿತು. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಬಗ್ಗೆಯೂ ಚರ್ಚೆ ನಡೆಯಿತು. ಸಂಬಂಧವನ್ನು ಸ್ಥಿರಗೊಳಿಸಲು ಮತ್ತು ಮರು ನಿರ್ಮಿಸಲು ನಿರ್ದಿಷ್ಟ ಜನಕೇಂದ್ರಿತ ಹೆಜ್ಜೆಗ ಬಗ್ಗೆಯೂ ಉಭಯ ದೇಶಗಳು ಒಪ್ಪಿಕೊಂಡಿವೆ.

ಕೈಲಾಸ ಮಾನಸ ಸರೋವರ ಯಾತ್ರೆಯ ಪುನಾರಂಭ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ. ಟಿಬೇಟ್ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆಯನ್ನು 2020ರ ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿತ್ತು. ಕೋವಿಡ್ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಯಾತ್ರೆ ಪುನಾರಂಭದ ಸಂಬಂಧ ಒಪ್ಪಂದ ನವೀಕರಣಗೊಂಡಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News