ಜಾಗತಿಕ ಭಯೋತ್ಪಾದನೆಗೆ ನೆರವಾಗುವ ದುಷ್ಟ ದೇಶ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಾಗ್ದಾಳಿ

ಸಾಂದರ್ಭಿಕ ಚಿತ್ರ | PC : PTI
ವಿಶ್ವಸಂಸ್ಥೆ: ಪಹಲ್ಗಾಮ್‍ನಲ್ಲಿ ಭಯೋತ್ಪಾದಕ ದಾಳಿಯ ಬಳಿಕ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿರುವಂತೆಯೇ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿರುವ ಭಾರತ `ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯ ಬೆಂಕಿಗೆ ಇಂಧನ ಸುರಿಯುತ್ತಿರುವ ದುಷ್ಟ ದೇಶ' ಎಂದು ಖಂಡಿಸಿದೆ.
`ಪಾಕಿಸ್ತಾನವು ಕಳೆದ ಹಲವು ದಶಕಗಳಿಂದ ಭಯೋತ್ಪಾದಕರಿಗೆ ತರಬೇತಿ ಮತ್ತು ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಆ ದೇಶದ ರಕ್ಷಣಾ ಸಚಿವರು ಬಹಿರಂಗವಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಈ ಮಾತನ್ನು ಭಾರತ ಹಲವು ಬಾರಿ ಪುನರುಚ್ಚರಿಸಿದೆ' ಎಂದು ವಿಶ್ವಸಂಸ್ಥೆಗೆ ಭಾರತದ ಕಾಯಂ ಉಪಪ್ರತಿನಿಧಿ ಯೋಜನಾ ಪಟೇಲ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಚೇರಿಯ `ವಿಕ್ಟಿಮ್ಸ್ ಆಫ್ ಟೆರರಿಸಂ ಅಸೋಸಿಯೇಷನ್ ನೆಟ್‍ವರ್ಕ್'ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪಟೇಲ್ ` ಒಂದು ನಿರ್ದಿಷ್ಟ ನಿಯೋಗವು (ದೇಶ) ಈ ವೇದಿಕೆಯನ್ನು ದುರುಪಯೋಗ ಪಡಿಸಿಕೊಳ್ಳಲು ಮತ್ತು ದುರ್ಬಲಗೊಳಿಸಲು, ಅನಗತ್ಯ ಹೇಳಿಕೆಯ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು , ಭಾರತದ ವಿರುದ್ಧದ ಆಧಾರರಹಿತ ಆರೋಪಗಳಿಗೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರವಾಗಿದೆ. ಭಯೋತ್ಪಾದಕರಿಗೆ ತರಬೇತಿ ಮತ್ತು ಆರ್ಥಿಕ ನೆರವು ಒದಗಿಸುವ ಪಾಕಿಸ್ತಾನದ ಇತಿಹಾಸವನ್ನು ಆ ದೇಶದ ರಕ್ಷಣಾ ಸಚಿವರೇ ಬಹಿರಂಗವಾಗಿ ಒಪ್ಪಿಕೊಂಡಿರುವುದಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಈ ಬಹಿರಂಗ ತಪ್ಪೊಪ್ಪಿಗೆ ಯಾರಿಗೂ ಅಚ್ಚರಿ ತಂದಿಲ್ಲ ಮತ್ತು ಇದು ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ದುಷ್ಟ ದೇಶ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ. ಇದನ್ನು ತಿಳಿದೂ ಇಡೀ ವಿಶ್ವವು ಕಣ್ಮುಚ್ಚಿ ಕುಳಿತಿರಲು ಸಾಧ್ಯವಿಲ್ಲ' ಎಂದರು.