ಸಿಂಧೂ ನೀರಿನ ಒಪ್ಪಂದ | ಅಮಾನತಿನಲ್ಲಿಡುವ ಭಾರತದ ನಿರ್ಧಾರ ತಿರಸ್ಕರಿಸಿದ ಪಾಕಿಸ್ತಾನ

PC : aljazeera.com
ಇಸ್ಲಾಮಾಬಾದ್: ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕ್ರಮವಾಗಿ ಭಾರತವು 1960ರಲ್ಲಿ ಏರ್ಪಟ್ಟಿದ್ದ ಸಿಂಧೂ ನೀರಿನ ಒಪ್ಪಂದವನ್ನು ಅಮಾನತಿನಲ್ಲಿಡುವ ಭಾರತದ ನಿರ್ಧಾರವನ್ನು ಪಾಕಿಸ್ತಾನವು ಗುರುವಾರ ತಿರಸ್ಕರಿಸಿದೆ.
ಭಾರತದ ಕ್ರಮಗಳಿಗೆ ಉತ್ತರವಾಗಿ ಪಾಕಿಸ್ತಾನವು ಪ್ರತಿಕ್ರಮಗಳನ್ನು ರೂಪಿಸುವುದಕ್ಕಾಗಿ ಗುರುವಾರ ಇಸ್ಲಾಮಾಬಾದ್ ನಲ್ಲಿ ಪ್ರಧಾನಿ ಶಹಬಾಝ್ ಶರೀಫ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ನಡೆಯಿತು.
ಸಭೆಯ ಬಳಿಕ ಪಾಕಿಸ್ತಾನದ ಪ್ರಧಾನಿ ಕಾರ್ಯಾಲಯವು ಹೇಳಿಕೆಯೊಂದನ್ನು ನೀಡಿ, ‘‘ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಡುವುದರಿಂದ 24 ಕೋಟಿ ಪಾಕಿಸ್ತಾನಿಯರ ಜೀವನಾಡಿಯನ್ನು ತಡೆಹಿಡಿದಂತಾಗುತ್ತದೆ’’ ಎಂದು ಹೇಳಿದೆ.
‘‘ಪಾಕಿಸ್ತಾನದ ಸಾರ್ವಭೌಮತೆ ಹಾಗೂ ಅದರ ಜನತೆಯ ಭದ್ರತೆಗೆ ಧಕ್ಕೆ ತರುವ ಯಾವುದೇ ಯತ್ನವನ್ನು, ಎಲ್ಲಾ ಕ್ಷೇತ್ರಗಳಲ್ಲಿಯೂ ದೃಢವಾದ ಪ್ರತಿಕ್ರಮಗಳೊಂದಿಗೆ ಎದುರಿಸಲಾಗುವುದು. ಭಾರತವು ತನ್ನ ಸಂಕುಚಿತವಾದ ರಾಜಕೀಯ ಕಾರ್ಯಸೂಚಿಯನ್ನು ಮುಂದಕ್ಕೊಯ್ಯಲು ಪಹಲ್ಗಾಮ್ ನಂತಹ ಘಟನೆಗಳನ್ನು ದುರ್ಬಳಕೆ ಮಾಡಿಕೊಂಡು ದೂಷಣೆಯ ಆಟದಲ್ಲಿ ತೊಡಗಕೂಡದು’’ ಪ್ರಧಾನಿ ಕಾರ್ಯಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಸಿಂಧೂ ನದಿ ಜಲ ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ಸೇರಿದ ನದಿ ನೀರಿನ ಹರಿವನ್ನು ತಡೆದು ನಿಲ್ಲಿಸುವುದು ಅಥವಾ ಬೇರೆಡೆಗೆ ತಿರುಗಿಸುವುದು ಹಾಗೂ ಕೆಳಗಿನ ನದಿತೀರ ಪ್ರದೇಶದ ಹಕ್ಕುಗಳನ್ನು ಕಬಳಿಸುವುದು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಸಂಪೂರ್ಣ ಶಕ್ತಿಯೊಂದಿಗೆ ಉತ್ತರ ನೀಡಲಾಗುವುದು’’ ಎಂದು ಹೇಳಿಕೆ ತಿಳಿಸಿದೆ.
ಶಿಮ್ಲಾ ಒಪ್ಪಂದ ಸೇರಿದಂತೆ ಭಾರತದ ಜೊತೆಗಿನ ಎಲ್ಲಾ ದ್ವಿಪಕ್ಷೀಯ ಒಡಂಬಡಿಕೆಗಳನ್ನು ಅಮಾನತುಗೊಳಿಸುವ ಹಕ್ಕನ್ನು ತಾನು ಹೊಂದಿರುವುದಾಗಿ ಪಾಕಿಸ್ತಾನ ಹೇಳಿದೆ.
►ಭಾರತೀಯ ವಿಮಾನಗಳಿಗೆ ವಾಯುಸೀಮೆ ಪ್ರವೇಶವನ್ನು ನಿಷೇಧಿಸಿದ ಪಾಕ್, ವಾಘಾ ಗಡಿಠಾಣೆ ಮುಚ್ಚುಗಡೆ
ಸಿಂಧೂನದಿ ನೀರಿನ ಒಪ್ಪಂದ ಅಮಾನತು, ಪಾಕ್ ಪ್ರಜೆಗಳ ವೀಸಾ ರದ್ದು , ಅಟ್ಟಾರಿ ಗಡಿ ಠಾಣೆ ಬಂದ್ ಸೇರಿದಂತೆ ಪಾಕಿಸ್ತಾನದ ವಿರುದ್ಧ ಭಾರತವು ಐದು ನಿರ್ಧಾರಗಳನ್ನು ಘೋಷಿಸಿರುವುದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡಾ ಗುರುವಾರ ಕೆಲವು ಪ್ರತಿಕ್ರಮಗಳನ್ನು ಘೋಷಿಸಿದೆ.
ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಸೀಮೆಯ ಪ್ರವೇಶವನ್ನು ನಿಷೇಧಿಸಿದೆ ಹಾಗೂ ವಾಘಾ ಗಡಿದಾಟು ಪ್ರದೇಶವನ್ನು ಮುಚ್ಚುಗಡೆಗೊಳಿಸಿದೆ. ತೃತೀಯ ರಾಷ್ಟ್ರದ ಮೂಲಕ ಹಾದುಹೋಗುವವೂ ಸೇರಿದಂತೆ ಭಾರತದ ಜೊತೆಗಿನ ಎಲ್ಲಾ ವಾಣಿಜ್ಯ ಮಾರ್ಗಗಳನ್ನು ಕೂಡಾ ಅಮಾನತುಗೊಳಿಸಿದೆ.
‘‘ಪಾಕಿಸ್ತಾನವು ವಾಘಾ ಗಡಿ ಠಾಣೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಚ್ಚುಗಡೆಗೊಳಿಸಲಿದೆ. ಈ ಮಾರ್ಗವಾಗಿ ನಡೆಯುವ ಎಲ್ಲಾ ಗಡಿದಾಟುವಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಸೂಕ್ತವಾದ ಅನುಮೋದನೆಗಳೊಂದಿಗೆ ಗಡಿಯನ್ನು ಈಗಾಗಲೇ ದಾಟಿದವರು 2025ರ ಎಪ್ರಿಲ್ 30ರೊಳಗೆ ಹಿಂದಿರುಗಬೇಕು’’ ಎಂದು ಹೇಳಿಕೆ ತಿಳಿಸಿದೆ.
ಸಾರ್ಕ್ ವೀಸಾ ವಿನಾಯಿತಿ ಯೋಜನೆ (ಎಸ್‌ವಿಇಎಸ್)ಯಡಿ ನೀಡಲಾಗುವ ವೀಸಾಗಳನ್ನು ಸಿಖ್ಖ್ ಧಾರ್ಮಿಕ ಯಾತ್ರಿಕರನ್ನು ಹೊರತುಪಡಿಸಿ ಇತರ ಭಾರತೀಯ ಪ್ರಜೆಗಳಿಗೆ ಅಮಾನತಿನಲ್ಲಿಡಲಾಗಿದೆ.
ಸಿಖ್ಖ್ ತೀರ್ಥಯಾತ್ರಿಕರನ್ನು ಹೊರತುಪಡಿಸಿ ಎಸ್‌ವಿಇಎಸ್ ವೀಸಾ ಯೋಜನೆಯಡಿ ಪ್ರಸಕ್ತ ಪಾಕಿಸ್ತಾನದಲ್ಲಿರುವ ಭಾರತೀಯ ಪ್ರಜೆಗಳು 48 ತಾಸುಗಳೊಳಗೆ ದೇಶತೊರೆಯಬೇಕು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.