ನೊಬೆಲ್ ಪುರಸ್ಕೃತ ಮುಹಮ್ಮದ್‌ ಯೂನುಸ್‌ ನೇತೃತ್ವದಲ್ಲಿ ಬಾಂಗ್ಲಾ ಮಧ್ಯಂತರ ಸರ್ಕಾರ

Update: 2024-08-07 03:21 GMT

ಢಾಕಾ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಮುಹಮ್ಮದ್‌ ಯೂನುಸ್‌ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಲಿದೆ ಎಂದು ಅಧ್ಯಕ್ಷ ಮೊಹ್ಮದ್ ಶಹಬುದ್ದೀನ್ ಅಬೆದಿನ್ ಅವರ ಮಾಧ್ಯಮ ಕಾರ್ಯದರ್ಶಿ ಪ್ರಕಟಿಸಿದ್ದಾರೆ. ಪ್ರಧಾನಿ ಶೇಕ್ ಹಸೀನಾ ಪದತ್ಯಾಗಕ್ಕೆ ಕಾರಣವಾದ ಚಳವಳಿ ರೂಪಿಸಿದ ವಿದ್ಯಾರ್ಥಿ ಮುಖಂಡರ ಜತೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಶೇಕ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಬೆನ್ನಲ್ಲೇ ಸೋಮವಾರ ಬಾಂಗ್ಲಾದೇಶ ಸೇನೆಯ ಮುಖ್ಯಸ್ಥ ಜನರಲ್ ವಕರ್ ಉಝ್ ಝಮಾನ್ ದೇಶವನ್ನು ನಿಭಾಯಿಸುವ ಹೊಣೆ ಹೊತ್ತಿದ್ದರು ಹಾಗೂ ಮಧ್ಯಂತರ ಸರ್ಕಾರ ಶೀಘ್ರವೇ ರಚನೆಯಾಗಲಿದೆ ಎಂದು ಪ್ರಕಟಿಸಿದ್ದರು. ಆದರೆ ಇದು ಯಾವಾಗ ರಚನೆಯಾಗಲಿದೆ ಹಾಗೂ ಯಾರು ಮುಖ್ಯಸ್ಥರಾಗಿರುತ್ತಾರೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇರಲಿಲ್ಲ.

ವೈದ್ಯಕೀಯ ಚಿಕಿತ್ಸೆಗಾಗಿ ಪ್ಯಾರೀಸ್‍ನಲ್ಲಿರುವ ಯೂನೂಸ್ (84) ಎಎಫ್‍ಪಿಗೆ ನೀಡಿದ ಲಿಖಿತ ಹೇಳಿಕೆಯಲ್ಲಿ, "ಪ್ರತಿಟನಾಕಾರರು ಇಟ್ಟ ವಿಶ್ವಾಸ ಮತ್ತು ಮಧ್ಯಂತರ ಸರ್ಕಾರದ ನಾಯಕತ್ವ ವಹಿಸಿಕೊಳ್ಳುವಂತೆ ಬಯಸಿರುವುದು ನನಗೆ ಸಿಕ್ಕಿದ ಗೌರವ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ. ಶಾಂತಿ ಮರುಸ್ಥಾಪನೆಗೆ ಮುಕ್ತ ಚುನಾವಣೆ ಅಗತ್ಯ ಎಂದು ಅವರು ಹೇಳಿದ್ದಾರೆ.

"ನನ್ನ ದೇಶಕ್ಕಾಗಿ ಮತ್ತು ನನ್ನ ಜನರ ಸಾಹಸಕ್ಕಾಗಿ ಬಾಂಗ್ಲಾದೇಶದಲ್ಲಿ ಕ್ರಮ ಅಗತ್ಯವಾದರೆ, ನಾನದನ್ನು ತೆಗೆದುಕೊಳ್ಳುತ್ತೇನೆ" ಎಂದು ಕಡುಬಡವರ ಬ್ಯಾಂಕರ್ ಎಂದೇ ಖ್ಯಾತರಾಗಿರುವ ಅವರು ಅಭಿಪ್ರಾಯಪಟ್ಟಿದ್ದಾರೆ. ಗ್ರಾಮೀಣ ಬ್ಯಾಂಕ್‍ಗಳ ಮೂಲಕ ಮೈಕ್ರೊ ಸಾಲವನ್ನು ನೀಡುವ ಯೋಜನೆ ಮೂಲ ಲಕ್ಷಾಂತರ ಬಡವರ ಕಲ್ಯಾಣಕ್ಕೆ ಅವರು ನೆರವಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News