ಗಾಝಾ ಸ್ನೇಹಿತನನ್ನು ಕಳೆದುಕೊಂಡಿದೆ: ಪೋಪ್ ಫ್ರಾನ್ಸಿಸ್ ಫೆಲೆಸ್ತೀನ್‌ ಗೆ ಬೆಂಬಲಿಸಿರುವುದನ್ನು ನೆನಪಿಸಿಕೊಂಡ ಸಾಮಾಜಿಕ ಜಾಲತಾಣಗಳ ಬಳಕೆದಾರರು!

Update: 2025-04-21 22:46 IST
ಗಾಝಾ ಸ್ನೇಹಿತನನ್ನು ಕಳೆದುಕೊಂಡಿದೆ: ಪೋಪ್ ಫ್ರಾನ್ಸಿಸ್ ಫೆಲೆಸ್ತೀನ್‌ ಗೆ ಬೆಂಬಲಿಸಿರುವುದನ್ನು ನೆನಪಿಸಿಕೊಂಡ ಸಾಮಾಜಿಕ ಜಾಲತಾಣಗಳ ಬಳಕೆದಾರರು!

Photo : images.dawn.com

  • whatsapp icon

ಹೊಸದಿಲ್ಲಿ: ಪೋಪ್‌ ಫ್ರಾನ್ಸಿಸ್ ಅವರ ನಿಧನದ ಬೆನ್ನಲ್ಲೇ ʼಗಾಝಾ ಓರ್ವ ಉತ್ತಮ ಸ್ನೇಹಿತʼನನ್ನು ಕಳೆದುಕೊಂಡಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ರೋಮನ್ ಕ್ಯಾಥೋಲಿಕ್ ಧರ್ಮದ ಅತ್ಯುನ್ನತ ಧಾರ್ಮಿಕ ಗುರುವಾದ ಪೋಪ್ ಫ್ರಾನ್ಸಿಸ್ ಸೋಮವಾರ ನಿಧನರಾದರು. ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮೊದಲ ಯುರೋಪಿಯನ್ ಅಲ್ಲದ ಪೋಪ್ ಆಗಿದ್ದ ಪೋಪ್ ಫ್ರಾನ್ಸಿಸ್ (88) ಅವರು ದೀರ್ಘಕಾಲದ ಶ್ವಾಸಕೋಶಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ನಿಧನದ ಒಂದು ದಿನ ಮೊದಲು ಅಂದರೆ ಈಸ್ಟರ್ ದಿನದಂದು ಸಂದೇಶದಲ್ಲಿ ಗಾಝಾದಲ್ಲಿ ಶಾಂತಿಗಾಗಿ ಕರೆ ನೀಡಿದ್ದರು. ಇಸ್ರೇಲ್ ಮತ್ತು ಫೆಲೆಸ್ತೀನ್‌ ಗೆ ಕದನ ವಿರಾಮ ಮತ್ತು ಒತ್ತೆಯಾಳುಗಳನ್ನು ಬಿಡುಗಡೆಗೆ ಮನವಿ ಮಾಡಿದ್ದರು. ಶಾಂತಿಯ ಭವಿಷ್ಯಕ್ಕಾಗಿ ಹಾತೊರೆಯುವ ಹಸಿವಿನಿಂದ ಬಳಲುತ್ತಿರುವ ಜನರ ನೆರವಿಗೆ ಬನ್ನಿ ಎಂದು ಜಗತ್ತಿಗೆ ಕರೆ ನೀಡಿದ್ದರು. ಇದು ಪೋಪ್ ಫ್ರಾನ್ಸಿಸ್ ಅವರ ಕೊನೆಯ ಸಂದೇಶವಾಗಿತ್ತು.

ʼಗಾಝಾದ ಜನರು ಮತ್ತು ಕ್ರಿಶ್ಚಿಯನ್ ಸಮುದಾಯದ ಬಗ್ಗೆ ನಾನು ಚಿಂತಿತನಾಗಿದ್ದೇನೆ. ಭೀಕರ ಸಂಘರ್ಷವು ಸಾವು ಮತ್ತು ವಿನಾಶಕ್ಕೆ ಕಾರಣವಾಗುತ್ತಿದೆ. ಶೋಚನೀಯ ಮಾನವೀಯ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆʼ ಎಂದು ಅವರು ಸಂದೇಶದಲ್ಲಿ ಹೇಳಿದ್ದರು. ಗಾಲಿ ಕುರ್ಚಿಯಲ್ಲಿ ಕುಳಿತಿದ್ದ ಅವರ ಪರವಾಗಿ ಇನ್ನೊಬ್ಬರು ಭಾಷಣ ಓದಿದ್ದರು.

ಪೋಪ್ ಫ್ರಾನ್ಸಿಸ್ ಈ ಹಿಂದೆ ಕೂಡ ಗಾಝಾದ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿದ್ದರು. ಕ್ರಿಸ್ಮಸ್ ಭಾಷಣದಲ್ಲಿ ಪೋಪ್ ಫ್ರಾನ್ಸಿಸ್ ಇಸ್ರೇಲ್‌ ನ ವೈಮಾನಿಕ ದಾಳಿ ಮತ್ತು ಫೆಲೆಸ್ತೀನ್ ಮಕ್ಕಳ ಹತ್ಯೆಯನ್ನು ಖಂಡಿಸಿದ್ದರು. ಇದು ಯುದ್ಧವಲ್ಲ, ಕ್ರೌರ್ಯ ಎಂದು ಹೇಳಿದ್ದರು.

►ಗಾಝಾದ ಚರ್ಚ್‌ಗೆ ಪ್ರತಿದಿನ ಕರೆ ಮಾಡುತ್ತಿದ್ದ ಪೋಪ್ ಫ್ರಾನ್ಸಿಸ್!

ಯುದ್ಧಪೀಡಿತ ಗಾಝಾದಲ್ಲಿನ ಫ್ಯಾಮಿಲಿ ಪ್ಯಾರಿಷ್ ಚರ್ಚ್‌ನೊಂದಿಗೆ ಪೋಪ್ ಫ್ರಾನ್ಸಿಸ್ ನಿರಂತರವಾಗಿ ಸಂಪರ್ಕದಲ್ಲಿದ್ದರು. ತೀವ್ರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿದ್ದರೂ ಪೋಪ್ ಫ್ರಾನ್ಸಿಸ್ ಗಾಝಾದ ಪ್ಯಾರಿಷ್ ಚರ್ಚ್ ಪಾದ್ರಿಗೆ ಪ್ರತಿದಿನ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ವಿಚಾರಿಸುತ್ತಿದ್ದರು.

ಗಾಝಾ ಚರ್ಚ್‌ನ ಪಾದ್ರಿ ರೆವರೆಂಡ್ ಗೇಬ್ರಿಯಲ್ ರೊಮೆನೆಲ್ಲಿ ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಪೋಪ್ ಫ್ರಾನ್ಸಿಸ್ ಪ್ರತಿದಿನ ರಾತ್ರಿ ಗಾಝಾ ಸಮಯ ರಾತ್ರಿ 8 ಗಂಟೆಗೆ ಕರೆ ಮಾಡುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ಅವರ ನಿಧನದ ನಂತರ ಲಂಡನ್‌ ನಲ್ಲಿರುವ ಫೆಲೆಸ್ತೀನ್ ರಾಯಭಾರಿ ಕಚೇರಿ ಫ್ರಾನ್ಸಿಸ್ ಅವರ ಅಂತಿಮ ಭಾಷಣದ ಕೆಲವು ತುಣುಕನ್ನು ಹಂಚಿಕೊಂಡು ಸಂತಾಪವನ್ನು ವ್ಯಕ್ತಪಡಿಸಿದೆ. ಪ್ರಪಂಚದಾದ್ಯಂತ ಜನರು ಧರ್ಮವನ್ನು ಲೆಕ್ಕಿಸದೆ ಪೋಪ್ ಫ್ರಾನ್ಸಿಸ್ ಅಗಲಿಕೆಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಲೇಖಕಿ ಫಾತಿಮಾ ಭುಟ್ಟೊ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ʼಪೋಪ್ ಫ್ರಾನ್ಸಿಸ್ ಅವರಿಲ್ಲದೆ ಜಗತ್ತು ನೈತಿಕವಾಗಿ ಬಡವಾಗಿದೆ. ಅವರು ಕೊನೆಯುಸಿರಿನವರೆಗೂ ಗಾಝಾಕ್ಕಾಗಿ ಮಾತನಾಡುತ್ತಿದ್ದರು ಮತ್ತು ಫೆಲೆಸ್ತೀನಿಯನ್ನರಿಗೆ ಸಾಂತ್ವನವನ್ನು ನೀಡಲು ಫ್ಯಾಮಿಲಿ ಪ್ಯಾರಿಷ್ ಚರ್ಚ್‌ಗೆ ಪ್ರತಿದಿನ ಕರೆ ಮಾಡುತ್ತಿದ್ದರು. ನಾನು ಅವರನ್ನು ಪ್ರೀತಿಸುತ್ತೇನೆ ಮತ್ತು ಅವರಿಗಾಗಿ ಪ್ರಾರ್ಥಿಸುತ್ತೇನೆʼ ಎಂದು ಹೇಳಿದ್ದಾರೆ.

ʼಅನೇಕ ಚರ್ಚ್‌ಗಳು ಫೆಲೆಸ್ತೀನ್‌ ಗೆ ಬೆನ್ನು ತಿರುಗಿಸಿದರೆ, ಪೋಪ್ ಫ್ರಾನ್ಸಿಸ್ ಗಾಝಾದಲ್ಲಿನ ಚರ್ಚ್‌ನೊಂದಿಗೆ ದಿನನಿತ್ಯ ಸಂಪರ್ಕದಲ್ಲಿದ್ದರು. ಅವರ ಪರವಾಗಿ ವಕಾಲತ್ತು ವಹಿಸಲು ಎಂದಿಗೂ ವಿಫಲರಾಗಲಿಲ್ಲʼ ಎಂದು ಎಕ್ಸ್ ಬಳಕೆದಾರರೋರ್ವರು ಹೇಳಿಕೊಂಡಿದ್ದಾರೆ.

ಬೆಥ್ ಲೆಹೆಮ್‌ನ ಪಾದ್ರಿಯಾದ ಮುಂಥರ್ ಐಸಾಕ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಫೆಲೆಸ್ತೀನ್ ಜನರು ಮತ್ತು ಫೆಲೆಸ್ತೀನ್ ಕ್ರಿಶ್ಚಿಯನ್ನರು ಇಂದು ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

►ಸ್ನೇಹಿತನನ್ನು ಕಳೆದುಕೊಂಡ ಗಾಝಾ

ಸಾಮಾಜಿಕ ಕಾರ್ಯಕರ್ತ ಝುಲ್ಫಿಕರ್ ಅಲಿ ಭುಟ್ಟೊ ಜೂನಿಯರ್ ಪೋಪ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಪ್ಯಾಲೆಸ್ತೀನ್‌ನ ದೊಡ್ಡ ಧ್ವನಿಗಳಲ್ಲಿ ಓರ್ವರು ಮತ್ತು ಈ ಧ್ವನಿಯನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ಪಾಕಿಸ್ತಾನದ ಅಧ್ಯಕ್ಷರಾದ ಆಸಿಫ್ ಅಲಿ ಜರ್ದಾರಿ ಅವರ ಪುತ್ರಿ ಬಖ್ತಾವರ್ ಭುಟ್ಟೋ ಜರ್ದಾರಿ, ಪೋಪ್ ಫ್ರಾನ್ಸಿಸ್ ಅವರು ತಮ್ಮ ಕೊನೆಯ ಸಾರ್ವಜನಿಕ ಭಾಷಣದಲ್ಲಿ ಗಾಝಾದಲ್ಲಿ ಕದನ ವಿರಾಮಕ್ಕೆ ಮನವಿ ಮಾಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಇದೇ ರೀತಿ ಪೋಸ್ಟ್ ಮಾಡಿದ್ದಾರೆ. ಓರ್ವ ವ್ಯಕ್ತಿ ಎಕ್ಸ್‌ನಲ್ಲಿನ ಪೋಸ್ಟ್ ನಲ್ಲಿ ʼಗಾಝಾ ಇಂದು ಬೆಳಿಗ್ಗೆ ಸ್ನೇಹಿತನನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಪೋಪ್ ಅವರ ನಿಧನದ ಬಗ್ಗೆ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಹೌಸ್ ಆಫ್ ಲಾರ್ಡ್ಸ್‌ನ ಬ್ರಿಟಿಷ್ ಸದಸ್ಯರಾದ ಮೆರಲ್ ಹುಸೇನ್ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಗಾಝಾ ಕದನ ವಿರಾಮಕ್ಕೆ ಅವರು ಕರೆ ನೀಡಿರುವುದನ್ನು ನೆನಪಿಸಿಕೊಂಡಿದ್ದಾರೆ. ಜೋ ಬೈಡೆನ್ ಮತ್ತು ಪ್ರಪಂಚದಾದ್ಯಂತದ ಇತರ ಕ್ರಿಶ್ಚಿಯನ್ ನಾಯಕರು ನಿರ್ಲಕ್ಷಿಸಿರುವಾಗ ಪೋಪ್ ಫ್ರಾನ್ಸಿಸ್ ನಿರಂತರವಾಗಿ ಕದನ ವಿರಾಮಕ್ಕೆ ಕರೆ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ.

ಭಾರತೀಯ ಪತ್ರಕರ್ತೆ ರಾಣಾ ಅಯ್ಯೂಬ್ ಅವರು ʼಪೋಪ್ ಫ್ರಾನ್ಸಿಸ್ ನಮ್ಮನ್ನು ಅಗಲಿದ್ದಾರೆ. ಗಾಝಾವನ್ನು ತನ್ನ ಪ್ರಾರ್ಥನೆಯಲ್ಲಿ, ಸುಡಾನ್ ಅನ್ನು ತನ್ನ ಹೃದಯದಲ್ಲಿ ಹೊತ್ತ ಮಾರ್ಗದರ್ಶಕರವರು. ತಮ್ಮ ಅಂತಿಮ ದಿನಗಳಲ್ಲಿಯೂ ಅವರು ಯುದ್ಧ ಸಂತ್ರಸ್ತರ ಪರವಾಗಿ ಮತ್ತು ಬಾಂಬ್ ದಾಳಿ ಬಗ್ಗೆ ಮಾತನಾಡಿದರು. ಅವರ ಪವಿತ್ರ ಆತ್ಮವು ಈಗ ವಿಶ್ರಾಂತಿ ಪಡೆಯುತ್ತಿದೆ ಎಂದು ಹೇಳಿದ್ದಾರೆ.

Full View

ʼಗಾಝಾದ ಮೇಲಿನ ಇಸ್ರೇಲ್‌ ನ ದಾಳಿಯನ್ನು ನಿಖರವಾಗಿ ʼಭಯೋತ್ಪಾದನೆʼ ಎಂದು ಹೇಳುವಲ್ಲಿ ಧೈರ್ಯ ತೋರಿದ ಧಾರ್ಮಿಕ ಮುಖಂಡರಲ್ಲಿ ಪೋಪ್ ಓರ್ವರುʼ ಎಂದು ಇನ್ನೋರ್ವರು ಹೇಳಿಕೊಂಡಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ಜಗತ್ತು ನಿಜವಾಗಿಯೂ ಶಾಂತಿಯ ದಾರಿದೀಪವನ್ನು ಕಳೆದುಕೊಂಡಿದೆ. ಈಗ, ಎಂದಿಗಿಂತಲೂ ಹೆಚ್ಚಾಗಿ, ನಾವು ಅವರ ಸಾಮರಸ್ಯದ ಬೋಧನೆಗಳನ್ನು ನೆನಪಿಸಿಕೊಳ್ಳಬೇಕಾಗಿದೆ. ಪೋಪ್ ಫ್ರಾನ್ಸಿಸ್ ತಮ್ಮ ಕೊನೆಯ ಭಾಷಣದಲ್ಲಿ ಹೇಳಿರುವಂತೆ ಧಾರ್ಮಿಕ ಸ್ವಾತಂತ್ರ್ಯ, ಆಲೋಚನಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಇತರರ ಅಭಿಪ್ರಾಯಗಳಿಗೆ ಗೌರವವಿಲ್ಲದೆ ಶಾಂತಿ ಇರುವುದಿಲ್ಲ ಎಂಬುವುದು ಗಮನಾರ್ಹ.

ಸೌಜನ್ಯ: images.dawn.com

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News