ಇಸ್ರೇಲ್ ಸೇನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಹೆಸರಿಸಲು ಇರಾನ್ ಆಗ್ರಹ

Update: 2023-11-11 18:24 GMT

Photo- PTI

ರಿಯಾದ್ : ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಅದನ್ನು ಭಯೋತ್ಪಾದಕ ಸಂಘಟನೆಯೆಂದು ಹೆಸರಿಸುವಂತೆ ಮುಸ್ಲಿಂ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸಿ ಆಗ್ರಹಿಸಿದ್ದಾರೆ.

ಸೌದಿ ಅರೆಬಿಯಾದ ರಾಜಧಾನಿ ರಿಯಾದ್‍ನಲ್ಲಿ ನಡೆದ ಅರಬ್ ಮತ್ತು ಮುಸ್ಲಿಮ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು `ಇಸ್ರೇಲ್‍ನೊಂದಿಗೆ ಸಂಬಂಧ ಹೊಂದಿರುವ ರಾಷ್ಟ್ರಗಳು ಅದನ್ನು ಕಡಿದುಕೊಳ್ಳುವಂತೆ ಮತ್ತು ಫೆಲೆಸ್ತೀನೀಯರಿಗೆ ಹೆಚ್ಚಿನ ಬೆಂಬಲ ನೀಡಬೇಕೆಂದು' ಕರೆ ನೀಡಿದರು. ಯೆಹೂದಿ ಆಡಳಿತ(ಇಸ್ರೇಲ್)ದ ಜತೆಗಿನ ಯಾವುದೇ ರೀತಿಯ ರಾಜಕೀಯ ಅಥವಾ ಆರ್ಥಿಕ ಸಂಬಂಧವನ್ನು ಕಡಿದುಕೊಳ್ಳುವುದಕ್ಕೆ ಮುಸ್ಲಿಂ ದೇಶಗಳು ಆದ್ಯತೆ ನೀಡಬೇಕು ಎಂದರು.

ಸಂಬಂಧ ಮರುಸ್ಥಾಪಿಸಲು ಮಾರ್ಚ್‍ನಲ್ಲಿ ಇರಾನ್ ಮತ್ತು ಸೌದಿ ಅರೆಬಿಯಾ ಒಪ್ಪಂದ ಮಾಡಿಕೊಂಡ ಬಳಿಕ ರೈಸಿ ಸೌದಿಗೆ ನೀಡಿದ ಪ್ರಥಮ ಭೇಟಿ ಇದಾಗಿದೆ.

ಗಾಝಾ ಸಂಘರ್ಷಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ:

► ಇಸ್ರೇಲ್ ವೈಮಾನಿಕ ದಾಳಿಯಿಂದ ಗಾಝಾದಲ್ಲಿ ಮೃತರ ಸಂಖ್ಯೆ 11,000 ದಾಟಿರುವುದಾಗಿ ಗಾಝಾ ಆರೋಗ್ಯ ಇಲಾಖೆ ಹೇಳಿದೆ.

► ಲೆಬನಾನ್ ನಗರಕ್ಕೆ ಇಸ್ರೇಲ್ ಡ್ರೋನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ.

► ಅಮೆರಿಕ ಮತ್ತು ಅಂತರಾಷ್ಟ್ರೀಯ ಪಡೆಗಳಿಗೆ ಆತಿಥ್ಯ ಒದಗಿಸುವ ಇರಾಕ್‍ನ ಅಲ್-ಹರಿರ್ ವಾಯುನೆಲೆಯ ಮೇಲೆ ಸಶಸ್ತ್ರ ಡ್ರೋನ್ ದಾಳಿ ನಡೆಸಿದ್ದು ವಾಯುನೆಲೆಗೆ ಹಾನಿಯಾಗಿದೆ ಎಂದು ಮೂಲಗಳು ಹೇಳಿವೆ.

► ಪಶ್ಚಿಮದಂಡೆಯಲ್ಲಿ ಇಸ್ರೇಲ್‍ನ ರಕ್ಷಣಾ ಪಡೆ 19 ಫೆಲೆಸ್ತೀನೀಯರನ್ನು ಬಂಧಿಸಿದ್ದು ಇವರಲ್ಲಿ 9 ಮಂದಿ ಹಮಾಸ್ ಕಾರ್ಯಕರ್ತರೆಂದು ಗುರುತಿಸಲಾಗಿದೆ.

► ಅಕ್ಟೋಬರ್ 7ರಿಂದ ಪಶ್ಚಿಮದಂಡೆಯಲ್ಲಿ 1,560 ಫೆಲೆಸ್ತೀನೀಯರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News