ಇರಾನ್ ಮಾಡಿದ ಪ್ರಮಾದಕ್ಕೆ ಬೆಲೆ ತೆರಬೇಕು : ನೆತನ್ಯಾಹು ಎಚ್ಚರಿಕೆ
ಟೆಲ್ ಅವೀವ್ : ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯ ಮೂಲಕ ಇರಾನ್ ದೊಡ್ಡ ಪ್ರಮಾದ ಎಸಗಿದ್ದು ಇದಕ್ಕೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಜೆರುಸಲೇಂನಲ್ಲಿ ನಡೆದ ಸೆಕ್ಯುರಿಟಿ ಕ್ಯಾಬಿನೆಟ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು `ಇಸ್ರೇಲ್‍ನ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯ ಕಾರಣ ಇರಾನ್‍ನ ಕ್ಷಿಪಣಿ ದಾಳಿ ವಿಫಲವಾಗಿದೆ' ಎಂದರು. ದಾಳಿಯನ್ನು ವಿಫಲಗೊಳಿಸುವಲ್ಲಿ ಬೆಂಬಲ ನೀಡಿದ ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸಿದ ಅವರು ಶತ್ರುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಪ್ರತೀಕಾರ ತೀರಿಸಿಕೊಳ್ಳುವ ನಮ್ಮ ಸಾಮರ್ಥ್ಯ, ದೃಢನಿರ್ಧಾರವನ್ನು ಇರಾನ್‍ನ ಆಡಳಿತ ಅರ್ಥ ಮಾಡಿಕೊಂಡಿಲ್ಲ' ಎಂದಿದ್ದಾರೆ.
ನಮ್ಮ ಮೇಲೆ ಯಾರೇ ದಾಳಿ ಮಾಡಿದರೂ ನಾವು ಅವರ ಮೇಲೆ ಆಕ್ರಮಣ ಮಾಡುತ್ತೇವೆ ಎಂದ ಅವರು, ಇರಾನ್ ವಿರುದ್ಧ ಜಾಗತಿಕ ಸಮುದಾಯ ಒಗ್ಗೂಡಬೇಕು ಎಂದು ಒತ್ತಾಯಿಸಿದರು. ಈಗ ಮುಂದುವರಿದಿರುವ ಸಂಘರ್ಷವು ದಬ್ಬಾಳಿಕೆ ಮತ್ತು ಸ್ವಾತಂತ್ರ್ಯದ ನಡುವಿನ ಸ್ಪಷ್ಟವಾದ ಆಯ್ಕೆಗಾಗಿ ನಡೆಯುತ್ತಿದೆ. ನಮ್ಮ ಭದ್ರತೆ, ಒತ್ತೆಯಾಳುಗಳ ವಾಪಸಾತಿ ಮತ್ತು ರಾಷ್ಟ್ರದ ಭವಿಷ್ಯವನ್ನು ಭದ್ರಪಡಿಸುವ ಪ್ರಯತ್ನ ಮುಂದುವರಿಯಲಿದೆ ಎಂದಿದ್ದಾರೆ.