ಪರಮಾಣು ಬಾಂಬ್ ನಿಂದ ಇರಾನ್ ದೂರವಿಲ್ಲ: ವಿಶ್ವಸಂಸ್ಥೆ ಪರಮಾಣು ನಿಗಾ ಏಜೆನ್ಸಿ ಎಚ್ಚರಿಕೆ

Update: 2025-04-17 22:38 IST
ಪರಮಾಣು ಬಾಂಬ್ ನಿಂದ ಇರಾನ್ ದೂರವಿಲ್ಲ: ವಿಶ್ವಸಂಸ್ಥೆ ಪರಮಾಣು ನಿಗಾ ಏಜೆನ್ಸಿ ಎಚ್ಚರಿಕೆ

 PC : PTI

  • whatsapp icon

ವಿಶ್ವಸಂಸ್ಥೆ: ಪರಮಾಣು ಬಾಂಬ್ ಹೊಂದುವುದರಿಂದ ಇರಾನ್ ಹೆಚ್ಚು ದೂರವಿಲ್ಲ ಎಂದು ವಿಶ್ವಸಂಸ್ಥೆಯ ಪರಮಾಣು ನಿಗಾ ಏಜೆನ್ಸಿಯ ಮುಖ್ಯಸ್ಥ ರಾಫೆಲ್ ಗ್ರೋಸಿ ಎಚ್ಚರಿಕೆ ನೀಡಿದ್ದಾರೆ.

ಇದು ಒಂದು ಒಗಟಿನಂತಿದೆ. ಅವರು ತುಣುಕುಗಳನ್ನು ಹೊಂದಿದ್ದಾರೆ ಮತ್ತು ಒಂದು ದಿನ ಅವರು ಅಂತಿಮವಾಗಿ ಒಟ್ಟಿಗೆ ಜೋಡಿಸಬಹುದು. ಇನ್ನೂ ಸ್ವಲ್ಪ ದೂರದ ಹಾದಿ ಕ್ರಮಿಸಬೇಕಿದೆ. ಆದರೂ ಅವರು ಹೆಚ್ಚು ದೂರದಲ್ಲಿಲ್ಲ ಎಂಬುದನ್ನು ಅಂಗೀಕರಿಸಬೇಕಾಗಿದೆ ಎಂದು ಗ್ರೋಸಿ ಹೇಳಿದ್ದಾರೆ.

ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ದೀರ್ಘಕಾಲದಿಂದ ಶಂಕಿಸುತ್ತಿವೆ. ಆದರೆ ಇರಾನ್ ಇದನ್ನು ನಿರಾಕರಿಸಿದ್ದು ತನ್ನ ಪರಮಾಣು ಕಾರ್ಯಕ್ರಮಗಳು ಶಾಂತಿಯುತ ನಾಗರಿಕ ಉದ್ದೇಶಕ್ಕಾಗಿ ಎಂದು ಪ್ರತಿಪಾದಿಸಿದೆ.

ಇರಾನಿನ ಪರಮಾಣು ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಆ ದೇಶವು 2015ರ ಪರಮಾಣು ಒಪ್ಪಂದವನ್ನು ಅನುಸರಿಸುತ್ತಿದೆಯೇ ಎಂದು ನಿಗಾ ವಹಿಸುವ ಹೊಣೆಯನ್ನು ವಿಶ್ವಸಂಸ್ಥೆಯ ಪರಮಾಣು ನಿಗಾ ಏಜೆನ್ಸಿಗೆ ವಹಿಸಲಾಗಿದೆ. `ನಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿಲ್ಲ ಎಂದು ಅವರು(ಇರಾನ್) ಹೇಳಿದ ಮಾತ್ರಕ್ಕೆ ಅಂತರಾಷ್ಟ್ರೀಯ ಸಮುದಾಯ ನಂಬುವುದಿಲ್ಲ. ಪರಿಶೀಲನೆಯ ಅಗತ್ಯವಿದೆ ಎಂದು ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ(ಐಎಇಎ) ಮುಖ್ಯಸ್ಥರಾಗಿರುವ ಗ್ರೋಸಿ ಹೇಳಿದ್ದಾರೆ.

ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸಲು ಬುಧವಾರ ಇರಾನ್ ರಾಜಧಾನಿ ಟೆಹ್ರಾನ್ ಗೆ ಆಗಮಿಸಿರುವ ಗ್ರೋಸಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರನ್ನು ಭೇಟಿಯಾದರು. ಬಳಿಕ ಇರಾನಿನ ಪರಮಾಣು ಇಂಧನ ಏಜೆನ್ಸಿಯ ಮುಖ್ಯಸ್ಥ ಮುಹಮ್ಮದ್ ಇಸ್ಲಾಮಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.

ಈ ಮಧ್ಯೆ, ಇರಾನಿನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಅಮೆರಿಕ-ಇರಾನ್ ನಡುವಿನ ಎರಡನೇ ಉನ್ನತ ಮಟ್ಟದ ಮಾತುಕತೆ ಎಪ್ರಿಲ್ 19ರಂದು ರೋಮ್‌ ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

► ಎರಡನೇ ಸುತ್ತಿನ ಪರಮಾಣು ಮಾತುಕತೆ ರೋಮ್ ನಲ್ಲಿ : ಇರಾನ್

ಅಮೆರಿಕದೊಂದಿಗಿನ ಎರಡನೇ ಸುತ್ತಿನ ಪರಮಾಣು ಮಾತುಕತೆ ಈ ವಾರಾಂತ್ಯದಲ್ಲಿ(ಎಪ್ರಿಲ್ 19ರಂದು) ರೋಮ್‌ ನಲ್ಲಿ ನಡೆಯಲಿದೆ ಎಂದು ಇರಾನ್ ಗುರುವಾರ ದೃಢಪಡಿಸಿದೆ.

ರೋಮ್‌ ನಲ್ಲಿ ನಡೆಯುವ ಮಾತುಕತೆಗೂ ಒಮಾನ್ ಮಧ್ಯಸ್ಥಿಕೆ ವಹಿಸುತ್ತದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಇರ್ನಾ ವರದಿ ಮಾಡಿದೆ. ಕಳೆದ ವಾರಾಂತ್ಯದ ಒಮಾನ್ ರಾಜಧಾನಿ ಮಸ್ಕತ್ನಲ್ಲಿ ನಡೆದಿದ್ದ ಪ್ರಥಮ ಸುತ್ತಿನ ಮಾತುಕತೆ ಒಮಾನ್ ಮಧ್ಯಸ್ಥಿಕೆಯಲ್ಲಿ ನಡೆದಿದೆ. ಈ ಮಧ್ಯೆ, ಇರಾನ್ಗೆ ಆಗಮಿಸಿರುವ ವಿಶ್ವಸಂಸ್ಥೆಯ ಪರಮಾಣು ನಿಗಾ ಏಜೆನ್ಸಿ ಮುಖ್ಯಸ್ಥ ರಾಫೆಲ್ ಗ್ರೋಸಿ ಜತೆ ನಡೆಸಿದ ಸಭೆಯಲ್ಲಿ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಪ್ರಥಮ ಸುತ್ತಿನ ಮಾತುಕತೆಯ ವಿವರ ನೀಡಿದರು. ಜೊತೆಗೆ ಇರಾನಿನ ಶಾಂತಿಯುತ ಪರಮಾಣು ವ್ಯವಸ್ಥೆಗಳ ವಿರುದ್ಧದ ಬೆದರಿಕೆಯ ಬಗ್ಗೆ ಅಂತರಾಷ್ಟ್ರೀಯ ಪರಮಾಣು ಏಜೆನ್ಸಿ (ಐಎಇಎ)ಸ್ಪಷ್ಟ ಮತ್ತು ಪಾರದರ್ಶಕ ನಿಲುವನ್ನು ಅಳವಡಿಸಬೇಕೆಂದು ಒತ್ತಾಯಿಸಿದರು ಎಂದು ವರದಿ ಹೇಳಿದೆ. ಪ್ರಸ್ತುತ ಮಾತುಕತೆಗಳನ್ನು ಹಳಿ ತಪ್ಪಿಸಲು ಹಲವರು ಪ್ರಯತ್ನಿಸುತ್ತಿರುವುದರಿಂದ ನಮಗೆ ಶಾಂತಿಯ ಮಹಾ ನಿರ್ದೇಶಕರ ಅಗತ್ಯವಿದೆ. ಏಜೆನ್ಸಿಯನ್ನು ರಾಜಕೀಯದಿಂದ ದೂರವಿರಿಸುವ ಉದ್ದೇಶವನ್ನು ಗ್ರೋಸಿ ಸಾಧಿಸುತ್ತಾರೆ ಎಂಬ ನಂಬಿಕೆಯಿದೆ. ಪರಮಾಣು ಪುಷ್ಟೀಕರಣ(ಎನ್ರಿಚ್ಮೆಂಟ್) ವಿಷಯದಲ್ಲಿ ಯಾವುದೇ ಚರ್ಚೆಗೆ ಆಸ್ಪದವಿಲ್ಲ ' ಎಂದು ಅರಾಘ್ಚಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

2018ರಲ್ಲಿ ಪರಮಾಣು ಒಪ್ಪಂದ ಪತನಗೊಂಡ ಬಳಿಕ ಇರಾನ್ ತನ್ನ ಕಾರ್ಯಕ್ರಮಗಳ ಮೇಲಿನ ಮಿತಿಯನ್ನು ತ್ಯಜಿಸಿದ್ದು ಯುರೇನಿಯಂ ಅನ್ನು ಶೇಕಡಾ 60ರಷ್ಟು ಶುದ್ಧೀಕರಿಸುತ್ತಿದೆ. (ಪರಮಾಣು ಶಸ್ತ್ರಾಸ್ತ್ರಕ್ಕೆ 90% ಮಟ್ಟದ ಶುದ್ಧತೆ ಅಗತ್ಯವಿದೆ). ಇರಾನಿನ ಪರಮಾಣು ಸ್ಥಾವರಗಳಲ್ಲಿ ಐಎಇಎ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳಿಗೆ ಅಡ್ಡಿಪಡಿಸಲಾಗಿದೆ ಮತ್ತು ಅಂತರಾಷ್ಟ್ರೀಯ ಪರಮಾಣು ಸಂಸ್ಥೆಯ ಅತ್ಯಂತ ಅನುಭವಿ ಇನ್ಸ್ಪೆಕ್ಟರ್ಗಳನ್ನು ನಿರ್ಬಂಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News