ಅಫ್ಘಾನಿಸ್ತಾನದ ಅಣೆಕಟ್ಟು ಯೋಜನೆಗೆ ಇರಾನ್ ವಿರೋಧ
ಟೆಹ್ರಾನ್: ಹರಿರುದ್ ನದಿಯ ಮೇಲೆ ನೆರೆಯ ಅಫ್ಘಾನಿಸ್ತಾನ ನಿರ್ಮಿಸುವ ಅಣೆಕಟ್ಟು ನೀರಿನ ಹರಿವನ್ನು ನಿರ್ಬಂಧಿಸುತ್ತದೆ ಮತ್ತು ದ್ವಿಪಕ್ಷೀಯ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಇರಾನ್‍ನ ವಿದೇಶಾಂಗ ಇಲಾಖೆ ಹೇಳಿದೆ.
900 ಕಿ.ಮೀ.ಗಿಂತಲೂ ಹೆಚ್ಚಿನ ಗಡಿಯನ್ನು ಹಂಚಿಕೊಳ್ಳುವ ಎರಡು ದೇಶಗಳ ನಡುವಿನ ಸಂಬಂಧದಲ್ಲಿ ನೀರಿನ ಹಕ್ಕುಗಳು ದೀರ್ಘಕಾಲದಿಂದಲೂ ಬಿಕ್ಕಟ್ಟಿನ ಮೂಲವಾಗಿದೆ. ಹರಿರುದ್ ನದಿಯು ಮಧ್ಯ ಅಫ್ಘಾನಿಸ್ತಾನದ ಪರ್ವತಗಳಿಂದ ಇರಾನ್ ಗಡಿಪ್ರದೇಶದ ಮೂಲಕ ತುರ್ಕ್‍ಮೆನಿಸ್ತಾನ್‍ಗೆ ಹರಿಯುತ್ತದೆ. ನದಿಯ ಮೇಲೆ ನಿರ್ಮಿಸಲಾಗುವ ಪಾಷ್ದಾನ್ ಯೋಜನೆಯು ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ನೀರನ್ನು ಸಂಗ್ರಹಿಸುವ ಕಾರ್ಯ ಪ್ರಾರಂಭವಾಗಿದ್ದು ಈ ಯೋಜನೆ ಹೆರಾತ್ ಪ್ರಾಂತದ ಪ್ರಮುಖ ಮತ್ತು ಕಾರ್ಯತಂತ್ರದ ಯೋಜನೆಯಾಗಿದೆ ಎಂದು ಅಫ್ಘಾನಿಸ್ತಾನದ ಉಪಪ್ರಧಾನಿ ಅಬ್ದುಲ್ ಘನಿ ಬರಾದಾರ್ ಹೇಳಿದ್ದಾರೆ.
ಹೆರಾಟ್ ಪ್ರಾಂತದಲ್ಲಿ ನಿರ್ಮಾಣಗೊಳ್ಳುವ ಈ ಅಣೆಕಟ್ಟು ಸುಮಾರು 54 ದಶಲಕ್ಷ ಕ್ಯೂಬಿಕ್ ಮೀಟರ್‍ಗಳಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು 2 ಮೆಗಾವ್ಯಾಟ್‍ಗಳಷ್ಟು ವಿದ್ಯುತ್ ಉತ್ಪಾದಿಸಲಿದೆ ಮತ್ತು 13,000 ಹೆಕ್ಟೇರ್ ಗಳಷ್ಟು ಕೃಷಿ ಭೂಮಿಗೆ ನೀರುಣಿಸಲಿದೆ.
ಪಾಶ್ದಾನ್ ಯೋಜನೆಯಿಂದಾಗಿ ಇರಾನ್ ಪ್ರವೇಶಿಸುವ ನದಿ ನೀರಿನ ಪ್ರಮಾಣ ಕಡಿಮೆಯಾಗಲಿದ್ದು ಈ ಬಗ್ಗೆ ಅಫ್ಘಾನ್ ಸರಕಾರಕ್ಕೆ ಬಲವಾದ ಪ್ರತಿಭಟನೆ ಮತ್ತು ಕಳವಳವನ್ನು ವ್ಯಕ್ತಪಡಿಸಲಾಗಿದೆ. ದ್ವಿಪಕ್ಷೀಯ ಒಪ್ಪಂದಗಳು ಅಥವಾ ಅನ್ವಯವಾಗುವ ಸಾಂಪ್ರದಾಯಿಕ ತತ್ವಗಳು ಮತ್ತು ನಿಯಮಗಳಿಗೆ ಅನುಸಾರವಾಗಿ ಇರಾನ್‍ನ ಹಕ್ಕುಗಳನ್ನು ಗೌರವಿಸದೆ ಜಲ ಸಂಪನ್ಮೂಲಗಳು ಮತ್ತು ಜಲಾನಯನ ಯೋಜನೆಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದು ಇರಾನ್ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.