ಗಾಝಾ ತೆರಿಗೆ ಹಣ ನಾರ್ವೆಗೆ ವರ್ಗಾಯಿಸುವ ಯೋಜನೆಗೆ ಇಸ್ರೇಲ್ ಅನುಮೋದನೆ

Update: 2024-01-22 16:46 GMT

ಸಾಂದರ್ಭಿಕ ಚಿತ್ರ |Photo: aljazeera.com

ಟೆಲ್‍ಅವೀವ್: ಇಸ್ರೇಲ್ ಸಂಗ್ರಹಿಸುವ ಮತ್ತು ಗಾಝಾಕ್ಕೆ ಸಲ್ಲಬೇಕಿರುವ ತೆರಿಗೆ ಹಣವನ್ನು ಫೆಲೆಸ್ತೀನಿಯನ್ ಪ್ರಾಧಿಕಾರ(ಪಿಎ)ಗೆ ನೀಡುವ ಬದಲು ನಾರ್ವೆ ದೇಶಕ್ಕೆ ವರ್ಗಾಯಿಸುವ ಯೋಜನೆಗೆ ಇಸ್ರೇಲ್ ಅನುಮೋದನೆ ನೀಡಿರುವುದಾಗಿ ವರದಿಯಾಗಿದೆ.

ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲಿ ಸೀಮಿತ ಆಡಳಿತ ನಿರ್ವಹಿಸುತ್ತಿರುವ ಫೆಲಸ್ತೀನಿಯನ್ ಪ್ರಾಧಿಕಾರಕ್ಕೆ ತೆರಿಗೆ ಹಣವನ್ನು ವರ್ಗಾಯಿಸಲಾಗದು. ಅದರ ಬದಲು ಮೂರನೇ ದೇಶದ ಕೈಯಲ್ಲಿ ಇರುತ್ತದೆ. ಆದರೆ ತೆರಿಗೆ ಹಣ ಅಥವಾ ಅದರ ಅಧಿಕಾರವನ್ನು, ಮೂರನೇ ದೇಶ ಕೂಡಾ, ಯಾವುದೇ ಸಂದರ್ಭದಲ್ಲಿ ವರ್ಗಾಯಿಸಲೂ ಇಸ್ರೇಲ್‍ನ ವಿತ್ತ ಸಚಿವಾಲಯದ ಅನುಮೋದನೆ ಅಗತ್ಯವಿದೆ ಎಂದು ಇಸ್ರೇಲ್‍ನ ಅಧಿಕಾರಿಗಳು ಹೇಳಿದ್ದಾರೆ.

1990ರ ದಶಕದಲ್ಲಿ ಸಹಿ ಹಾಕಲಾದ ಒಪ್ಪಂದದಂತೆ, ಪಶ್ಚಿಮದಂಡೆಯಲ್ಲಿ ಫೆಲೆಸ್ತೀನೀಯರ ಪರವಾಗಿ ಇಸ್ರೇಲ್ ತೆರಿಗೆ ಸಂಗ್ರಹಿಸುತ್ತದೆ ಮತ್ತು ಇಸ್ರೇಲ್‍ನ ವಿತ್ತ ಸಚಿವಾಲಯದ ಅನುಮೋದನೆ ಪಡೆದು ಆ ಹಣವನ್ನು ಪ್ರತೀ ತಿಂಗಳು ಫೆಲೆಸ್ತೀನಿಯನ್ ಪ್ರಾಧಿಕಾರಕ್ಕೆ ವರ್ಗಾಯಿಸುತ್ತದೆ. 2007ರಲ್ಲಿ ಗಾಝಾ ಪಟ್ಟಿಯಿಂದ ಫೆಲೆಸ್ತೀನಿಯನ್ ಪ್ರಾಧಿಕಾರವನ್ನು ಪದಚ್ಯುತಗೊಳಿಸಲಾಗಿದ್ದರೂ ಈ ಪ್ರದೇಶದಲ್ಲಿ ಸಾರ್ವಜನಿಕ ಕ್ಷೇತ್ರದ ಸಿಬ್ಬಂದಿಗಳು ತಮ್ಮ ಕಾರ್ಯ ಮುಂದುವರಿಸಿದ್ದು ಇವರಿಗೆ ತೆರಿಗೆ ಸಂಗ್ರಹದ ಮೊತ್ತದಿಂದ ವೇತನ ಪಾವತಿಯಾಗುತ್ತಿದೆ.

ಆದರೆ ಅಕ್ಟೋಬರ್ 7ರ ಹಮಾಸ್ ದಾಳಿಯ ಬಳಿಕ ಗಾಝಾ ಪಟ್ಟಿಗಾಗಿ ಮೀಸಲಿರಿಸಿದ ನಿಧಿಯನ್ನು ಸ್ಥಂಭನಗೊಳಿಸಲು ಇಸ್ರೇಲ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ತೆರಿಗೆ ಹಣದಲ್ಲಿ ಕಡಿತ ಮಾಡಿ ಆಂಶಿಕ ನಿಧಿಯನ್ನು ಮಾತ್ರ ವರ್ಗಾಯಿಸುವುದನ್ನು ಫೆಲಸ್ತೀನಿಯನ್ ಪ್ರಾಧಿಕಾರ ವಿರೋಧಿಸಿದೆ. ನಮ್ಮ ಆರ್ಥಿಕ ಹಕ್ಕಿನಲ್ಲಿ ಯಾವುದೇ ಕಡಿತ ಅಥವಾ ಹಣ ವರ್ಗಾಯಿಸಲು ಷರತ್ತು ವಿಧಿಸುವುದನ್ನು ನಾವು ಒಪ್ಪುವುದಿಲ್ಲ. ಫೆಲೆಸ್ತೀನಿಯನ್ ಜನರ ಹಣವನ್ನು ಕದಿಯುವ ಈ ಪ್ರಯತ್ನವನ್ನು ತಡೆಯುವ ಮತ್ತು ನಮ್ಮ ಹಣವನ್ನು ವರ್ಗಾಯಿಸುವಂತೆ ಅಂತರಾಷ್ಟ್ರೀಯ ಸಮುದಾಯ ಇಸ್ರೇಲ್‍ನ ಮೇಲೆ ಒತ್ತಡ ಹೇರಬೇಕು ಎಂದು ಫೆಲೆಸ್ತೀನಿಯನ್ ಅಧಿಕಾರಿಗಳು ಆಗ್ರಹಿಸಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News