ರಫಾ ಮೇಲೆ ಇಸ್ರೇಲ್ ದಾಳಿ: ಸೌದಿ ಸಹಿತ ಸಾರ್ವತ್ರಿಕ ಖಂಡನೆ
ರಿಯಾದ್: ಗಾಝಾದ ರಫಾ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳು ಖಂಡಿಸಿವೆ. ಯುಎನ್ ಆರ್ ಡಬ್ಲ್ಯುಎ ಸಮೀಪ ಇದ್ದ ಸ್ಥಳಾಂತರಿತ ಫೆಲಸ್ತೀನಿಯರ ತಾತ್ಕಾಲಿಕ ಶಿಬಿರವನ್ನು ಗುರಿ ಮಾಡಿ ನಡೆಸಿದ ಈ ದಾಳಿಯಲ್ಲಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಠ 45 ಮಂದಿ ಮೃತಪಟ್ಟಿದ್ದರು.
ಜೋರ್ಡಾನ್, ಕುವೈಟ್, ಯುಎಇ ಕೂಡಾ ಇಸ್ರೇಲ್ ನ ದಾಳಿಯನ್ನು ಕಟುವಾಗಿ ಟೀಕಿಸಿವೆ. ಇಸ್ರೇಲಿ ಪಡೆಗಳು ಎಲ್ಲ ಅಂತಾರಾಷ್ಟ್ರೀಯ ಮತ್ತು ಮಾನವೀಯ ಕಾನೂನುಗಳನ್ನು ಸಾರಾಸಗಟಾಗಿ ಉಲ್ಲಂಘಿಸಿ ದಾಳಿ ನಡೆಸಿರುವುದು ಖಂಡನೀಯ ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ಎಕ್ಸ್ ಪೋಸ್ಟ್ನಲ್ಲಿ ಟೀಕಿಸಿದೆ. ತಕ್ಷಣವೇ ಅಂತಾರಾಷ್ಟ್ರೀಯ ಸಮುದಾಯ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಕು ಎಂದು ಆಗ್ರಹಿಸಿದೆ.
ಗಾಝಾದ ಮಾನವೀಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಇದನ್ನು ಯಾರೂ ಒಪ್ಪಿಕೊಳ್ಳಲಾಗದು ಎಂದು ಸೌದಿ ವಿದೇಶಾಂಗ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಸೋಮವಾರ ಹೇಳಿಕೆ ನೀಡಿದ್ದಾರೆ. ಈ ಪ್ರೇಶದಲ್ಲಿ ಫೆಲಸ್ತೀನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ತಪ್ಪಿಸಿ ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸುವ ಉದ್ದೇಶದಿಂದ ಎರಡು ದೇಶಗಳ ಪರಿಹಾರದ ಅಗತ್ಯತೆಯನ್ನು ಅವರು ಒತ್ತಿ ಹೇಳಿದ್ದಾರೆ.
ಎರಡು ದೇಶಗಳ ಪರಿಹಾರ ಸೂತ್ರವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹಲವು ಯೂರೋಪಿಯನ್ ದೇಶಗಳು ಫೆಲಸ್ತೀನಿಗೆ ಪ್ರತ್ಯೇಕ ದೇಶದ ಸ್ಥಾನಮಾನ ನೀಡಲು ಯೋಜಿಸಿದ್ದು, ಸ್ಪೇನ್, ಐರ್ಲೆಂಡ್ ಹಾಗೂ ನಾರ್ವೆ ಇದಕ್ಕೆ ಬೆಂಬಲ ಸೂಚಿಸಿವೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲಿನ ಸ್ವಾಧೀನ ಪಡೆಗಳು ಗಾಝಾದಲ್ಲಿ ನಡೆಸಿರುವ ಯುದ್ಧಾಪರಾಧಗಳು ಖಂಡನೀಯ ಎಂದು ಜೋರ್ಡಾನ್ ಟೀಕಿಸಿದೆ. ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸುವ ಮೂಲಕ ಇಸ್ರೇಲ್, ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದೆ ಮತ್ತು ಇದು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ತೀವ್ರ ಉಲ್ಲಂಘನೆಯಾಗಿದೆ ಎಂದು ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದೆ.