ಗಾಝಾದಲ್ಲಿ ಭೂ ಕಾರ್ಯಾಚರಣೆ ವಿಸ್ತರಿಸಿದ ಇಸ್ರೇಲ್; ದಾಳಿಯಲ್ಲಿ 85 ಮೃತ್ಯು, ನೆಟ್ ಝಾರಿಮ್ ಕಾರಿಡಾರ್ ಮರುವಶ

ಸಾಂದರ್ಭಿಕ ಚಿತ್ರ | PC : PTI/AP
ಟೆಲ್ ಅವೀವ್: ಗಾಝಾದಲ್ಲಿ ಕದನ ವಿರಾಮ ಒಪ್ಪಂದ ಮುರಿದು ಬಿದ್ದಿದ್ದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಭೂ ಕಾರ್ಯಾಚರಣೆ ಪ್ರಾರಂಭಿಸಿದ್ದು ಆಯಕಟ್ಟಿನ ನೆಟ್ ಝಾರಿಮ್ ಕಾರಿಡಾರ್ ಅನ್ನು ಮರು ವಶಪಡಿಸಿಕೊಂಡಿದೆ.
ಒತ್ತೆಯಾಳುಗಳನ್ನು ಹಸ್ತಾಂತರಿಸುವಂತೆ ಹಮಾಸ್‍ಗೆ `ಕೊನೆಯ ಎಚ್ಚರಿಕೆ' ನೀಡಿರುವುದಾಗಿ ಇಸ್ರೇಲ್ ಹೇಳಿದ್ದು ಗೊಲಾನಿ ಬ್ರಿಗೇಡ್ ನ ಪದಾತಿ ತುಕಡಿಯನ್ನು ಗಾಝಾದ ದಕ್ಷಿಣ ಗಡಿಯ ದಕ್ಷಿಣ ಕಮಾಂಡ್ ಪ್ರದೇಶದಲ್ಲಿ ಇರಿಸಲಾಗಿದ್ದು ಗಾಝಾ ಪಟ್ಟಿಯಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಿರುತ್ತದೆ. ಇನ್ನು ಮುಂದೆ ಫೆಲೆಸ್ತೀನೀಯರಿಗೆ ದಕ್ಷಿಣದಿಂದ ಉತ್ತರ ಗಾಝಾ ಪ್ರವೇಶಿಸಲು ಅನುಮತಿಸುವುದಿಲ್ಲ . ತನ್ನ ಕಾರ್ಯಾಚರಣೆಗಳು ಉತ್ತರ ಮತ್ತು ದಕ್ಷಿಣ ಗಾಝಾದ ನಡುವೆ ಬಫರ್ ವಲಯವನ್ನು ರಚಿಸುವ ಗುರಿಯನ್ನು ಹೊಂದಿದ ಮತ್ತು ಗಾಝಾವನ್ನು ವಿಭಜಿಸುವ ನೆಟ್ ಝಾರಿಮ್ ಕಾರಿಡಾರ್ ನ ಮೇಲೆ ಇಸ್ರೇಲ್ ನ ನಿಯಂತ್ರಣವನ್ನು ವಿಸ್ತರಿಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಈ ಮಧ್ಯೆ, ಗಾಝಾ ಪಟ್ಟಿಯ ಉತ್ತರ ಮತ್ತು ದಕ್ಷಿಣ ಪ್ರದೇಶದಲ್ಲಿ ಹಲವಾರು ಮನೆಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ಮುಂದುವರಿಸಿದೆ. ಗುರುವಾರ ಇಸ್ರೇಲ್ ನ ದಾಳಿಯಲ್ಲಿ ಕನಿಷ್ಠ 85 ಫೆಲಸ್ತೀನೀಯರು ಸಾವನ್ನಪ್ಪಿದ್ದು ಇತರ 133 ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಇಸ್ರೇಲ್ ನ ಭೂ ಕಾರ್ಯಾಚರಣೆ ಮತ್ತು ನೆಟ್ ಝಾರಿಮ್ ಕಾರಿಡಾರ್ ಗೆ ಆಕ್ರಮಣವು ಎರಡು ತಿಂಗಳಿಂದ ಜಾರಿಯಲ್ಲಿರುವ ಕದನ ವಿರಾಮ ಒಪ್ಪಂದದ ಹೊಸ ಮತ್ತು ಅಪಾಯಕಾರಿ ಉಲ್ಲಂಘನೆಯಾಗಿದೆ ಎಂದು ಹಮಾಸ್ ಖಂಡಿಸಿದೆ. ಒಪ್ಪಂದಕ್ಕೆ ತನ್ನ ಬದ್ಧತೆಯನ್ನು ಹಮಾಸ್ ಪುನರುಚ್ಚರಿಸಿದ್ದು ಮಧ್ಯಸ್ಥಿಕೆದಾರರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ಆಗ್ರಹಿಸಿದೆ.