ಗಾಝಾದ ಉತ್ತರ-ದಕ್ಷಿಣ ಮಾರ್ಗದಲ್ಲಿ ಸಂಚಾರ ನಿಷೇಧಿಸಿದ ಇಸ್ರೇಲ್
Update: 2025-03-20 21:34 IST

PC | NDTV
ಜೆರುಸಲೇಂ: ಗಾಝಾದ ಮುಖ್ಯ ಉತ್ತರ-ದಕ್ಷಿಣ ಮಾರ್ಗದಲ್ಲಿ ಇಸ್ರೇಲ್ ಸೈನ್ಯವು ಸಂಚಾರವನ್ನು ನಿಷೇಧಿಸಿದೆ. ಉತ್ತರ ಮತ್ತು ದಕ್ಷಿಣ ಗಾಝಾದ ನಡುವೆ ಭದ್ರತಾ ವಲಯವನ್ನು ವಿಸ್ತರಿಸಲು ಇಸ್ರೇಲ್ ಭದ್ರತಾ ಪಡೆಯ ಯೋಧರು ಉದ್ದೇಶಿತ ಭೂ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಇಸ್ರೇಲ್ ಸೇನೆಯ ವಕ್ತಾರ ಅವಿಚೇ ಆಡ್ರಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
`ನಿಮ್ಮ ಸುರಕ್ಷತೆಗಾಗಿ ಗಾಝಾ ಪಟ್ಟಿಯ ಉತ್ತರ ಮತ್ತು ದಕ್ಷಿಣದ ನಡುವೆ ಸಲಾಹೆದ್ದಿನ್ ರಸ್ತೆಯಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ. ಬದಲಾಗಿ, ಅಲ್-ರಶೀದ್ ಕರಾವಳಿ ರಸ್ತೆಯ ಮೂಲಕ ಉತ್ತರ ಗಾಝಾದಿಂದ ದಕ್ಷಿಣ ಗಾಝಾಕ್ಕೆ ಸಂಚಾರ ಸಾಧ್ಯವಿದೆ' ಎಂದವರು ಹೇಳಿದ್ದಾರೆ. ಗಾಝಾ ನಗರದ ದಕ್ಷಿಣದಲ್ಲಿರುವ ನೆಟ್ ಝಾರಿಮ್ ಜಂಕ್ಷನ್ ಅನ್ನು ಇಸ್ರೇಲಿ ಸೇನೆ ಮುಚ್ಚಿದ್ದು ಇಲ್ಲಿ ಇಸ್ರೇಲಿ ಟ್ಯಾಂಕ್ ಗಳನ್ನು ನಿಯೋಜಿಸಲಾಗಿದೆ ಎಂದು ಗಾಝಾದ ಆಂತರಿಕ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.