ಗಾಝಾ, ಲೆಬನಾನ್, ಸಿರಿಯಾದಲ್ಲಿ ಅನಿರ್ದಿಷ್ಟಾವಧಿಗೆ ಸೇನೆಯ ಉಪಸ್ಥಿತಿ: ಇಸ್ರೇಲಿ ರಕ್ಷಣಾ ಸಚಿವರ ಘೋಷಣೆ

ಇಸ್ರೇಲ್ ಕಾಟ್ಝ್ | PC : NDTV
ಜೆರುಸಲೇಂ: ಗಾಝಾ ಪಟ್ಟಿ, ಲೆಬನಾನ್ ಮತ್ತು ಸಿರಿಯಾದಲ್ಲಿ ಅನಿರ್ದಿಷ್ಟಾವಧಿಗೆ ಇಸ್ರೇಲ್ ಪಡೆಗಳ ಉಪಸ್ಥಿತಿ ಮುಂದುವರಿಯಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ಬುಧವಾರ ಘೋಷಿಸಿದ್ದಾರೆ. ಈ ಹಿಂದಿನಂತೆ, ಇಸ್ರೇಲ್ ಮಿಲಿಟರಿಯು ವಶಪಡಿಸಿಕೊಂಡ ಹಾಗೂ ತೆರವುಗೊಳಿಸಿದ ಪ್ರದೇಶದಿಂದ ಸ್ಥಳಾಂತರಗೊಳ್ಳುವುದಿಲ್ಲ. ಮಿಲಿಟರಿಯು ಶತ್ರುಗಳು ಹಾಗೂ ಇಸ್ರೇಲಿ ಸಮುದಾಯದ ನಡುವೆ ರಕ್ಷಾ ಕವಚದಂತೆ ಭದ್ರತಾ ವಲಯದಲ್ಲಿ ಉಳಿದುಕೊಳ್ಳಲಿದೆ ಎಂದವರು ಹೇಳಿದ್ದಾರೆ.
ನಮ್ಮ ನೀತಿ ಸ್ಪಷ್ಟವಾಗಿದೆ. ಯಾವುದೇ ರೀತಿಯ ಮಾನವೀಯ ನೆರವು ಗಾಝಾವನ್ನು ಪ್ರವೇಶಿಸುವುದಿಲ್ಲ. ಜನಸಾಮಾನ್ಯರೊಂದಿಗೆ ಹಮಾಸ್ ಈ ನೆರವನ್ನು ಸಾಧನವನ್ನಾಗಿ ಬಳಸುವುದನ್ನು ತಡೆಯುವುದು ನಮ್ಮ ಉದ್ದೇಶವಾಗಿದೆ ಎಂದು ಕಾಟ್ಜ್ ಹೇಳಿರುವುದಾಗಿ ವರದಿಯಾಗಿದೆ. ಈ ಮಧ್ಯೆ, 2023ರ ಅಕ್ಟೋಬರ್ ನಲ್ಲಿ ಯುದ್ಧ ಪ್ರಾರಂಭಗೊಂಡಂದಿನಿಂದ ಗಾಝಾ ಪ್ರದೇಶ ಅತ್ಯಂತ ತೀವ್ರ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.