ಸಂಧಾನ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಇಸ್ರೇಲ್ ಪ್ರಧಾನಿ ಯತ್ನ: ಖತರ್
ರಫಾ: ಒತ್ತೆಯಾಳುಗಳ ಬಿಡುಗಡೆಗಾಗಿ ಹಮಾಸ್ ಜೊತೆ ತಾನು ನಡೆಸುತ್ತಿರುವ ಸಂಧಾನ ಪ್ರಯತ್ನಗಳನ್ನು ಇಸ್ರೇಲಿ ಪ್ರಧಾನಿ ಟೀಕಿಸಿರುವುದರಿಂದ ತನಗೆ ತೀವ್ರ ಆಘಾತವಾಗಿದೆ ಎಂದು ಖತರ್ ಶನಿವಾರ ಹೇಳಿದೆ.
ಈ ಬಗ್ಗೆ ಖತರ್ನ ವಿದೇಶಾಂಗ ಚಿವಾಲಯದ ವಕ್ತಾರ ಮಜೀದ್ ಅಲ್ ಅನ್ಸಾರಿ ಅವರು ಗುರುವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು ನೆತನ್ಯಾಹು ಅವರ ಈ ಹೇಳಿಕೆಗಳಿಂದ ತನ್ನ ಸರಕಾರಕ್ಕೆ ಆಘಾತವಾಗಿದೆ. ಆದರೆ ಅಂತಹ ಹೇಳಿಕೆಗಳು ಅಚ್ಚರಿಯದ್ದೇನೂ ಅಲ್ಲವೆಂದು ಹೇಳಿದ್ದಾರೆ.
‘‘ನೆತನ್ಯಾಹು ಅವರು ಹೀಗೆ ಹೇಳಿರವುದು ನಿಜವೇ ಆಗಿದ್ದಲ್ಲಿ ಇಸ್ರೇಲಿ ಪ್ರಧಾನಿ ಅವರೇ ಸಂಧಾನ ಪ್ರತಿಕ್ರಿಯೆಗೆ ಅಡ್ಡಿಪಡಿಸುತ್ತಿದ್ದಾರೆ ಹಾಗೂ ದುರ್ಬಲಗೊಳಿಸುತ್ತಿದ್ದಾರೆಂಬುದು ಸ್ಪಷ್ಟವಾಗುತ್ತದೆ. ಇಸ್ರೇಲಿ ಒತ್ತೆಯಾಳುಗಳು ಸೇರಿದಂತೆ ಅಮಾಯಕರ ಪ್ರಾಣಗಳನ್ನು ರಕ್ಷಿಸುವುದಕ್ಕೆ ಆದ್ಯತೆ ನೀಡುವ ಬದಲು ಅವರು ತನ್ನ ರಾಜಕೀಯ ಜೀವನಕ್ಕೆ ಪ್ರಯೋಜನವಾಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಅಲ್-ಅನ್ಸಾರಿ ತಿಳಿಸಿದ್ದಾರೆ.