ಸಾರ್ವತ್ರಿಕ ಮುಷ್ಕರಕ್ಕೆ ಇಸ್ರೇಲ್ ಭಾಗಶಃ ಸ್ತಬ್ಧ | ಕದನ ವಿರಾಮ ಒಪ್ಪಂದಕ್ಕೆ ಸರಕಾರದ ಮೇಲೆ ಒತ್ತಡ
ಟೆಲ್‍ಅವೀವ್ : ಗಾಝಾದ ಸುರಂಗದಲ್ಲಿ 6 ಒತ್ತೆಯಾಳುಗಳ ಮೃತದೇಹ ಪತ್ತೆಯಾದ ಬಳಿಕ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೇಲೆ ಒತ್ತಡ ಹೇರಲು ಸೋಮವಾರ ಕಾರ್ಮಿಕ ಸಂಘದ ನೇತೃತ್ವದಲ್ಲಿ ರಾಷ್ಟ್ರಾದ್ಯಂತ ಸಾರ್ವತ್ರಿಕ ಮುಷ್ಕರ ನಡೆದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಬದುಕುಳಿದಿರುವ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗೆ ನೆತನ್ಯಾಹು ಕ್ರಮ ಕೈಗೊಳ್ಳಬೇಕು. ತಮ್ಮ ಪಟ್ಟು ಸಡಿಲಿಸಿ ಕದನ ವಿರಾಮಕ್ಕೆ ಸಮ್ಮತಿಸಬೇಕು ಎಂದು ಮುಷ್ಕರ ನಿರತರು ಆಗ್ರಹಿಸಿದ್ದಾರೆ. ಅಕ್ಟೋಬರ್ 7ರಂದು ಹಮಾಸ್ ಅಪಹರಿಸಿದ್ದ 251 ಒತ್ತೆಯಾಳುಗಳಲ್ಲಿ 97 ಮಂದಿ ಇನ್ನೂ ಗಾಝಾದಲ್ಲಿ ಉಳಿದಿದ್ದಾರೆ ಎಂದು ನಂಬಲಾಗಿದೆ. ಇದುವರೆಗೆ 33 ಒತ್ತೆಯಾಳುಗಳು ಮೃತಪಟ್ಟಿರುವುದನ್ನು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ದೃಢಪಡಿಸಿದೆ.
ಇಸ್ರೇಲ್ ಸರಕಾರದ ವಿರುದ್ಧ ರವಿವಾರ ಟೆಲ್‍ಅವೀವ್‍ನಲ್ಲಿ ಬೃಹತ್ ರ‍್ಯಾಲಿ ನಡೆದಿದ್ದು ಪ್ರಧಾನಿ ನೆತನ್ಯಾಹು ಸರಕಾರ ಒತ್ತೆಯಾಳುಗಳ ಸುರಕ್ಷಿತ ವಾಪಸಾತಿಗೆ ಸಾಕಷ್ಟು ಪ್ರಯತ್ನ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದ್ದು, ಇನ್ನೂ ಒತ್ತೆಸೆರೆಯಲ್ಲಿ ಇರುವವರ ಬಿಡುಗಡೆಗೆ ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿಸಬೇಕೆಂದು ಆಗ್ರಹಿಸಲಾಗಿದೆ. ಟೆಲ್ ಅವೀವ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ 3 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರೆ ದೇಶದ ಇತರೆಡೆ ನಡೆದ ಪ್ರತಿಭಟನೆಯಲ್ಲಿ ಸುಮಾರು 2 ಲಕ್ಷ ಜನರು ಪಾಲ್ಗೊಂಡಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಜೆರುಸಲೇಂನಲ್ಲಿ ರಸ್ತೆ ತಡೆ ನಡೆಸಿದ ಬಳಿಕ ಪ್ರಧಾನಿಯವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಲಾಗಿದೆ. ಗಾಝಾದಲ್ಲಿ ಹತರಾದ ಒತ್ತೆಯಾಳುಗಳ ಫೋಟೋವನ್ನು ಹಿಡಿದಿದ್ದ ಪ್ರತಿಭಟನಾಕಾರರು ಟೆಲ್‍ಅವೀವ್‍ನ ಮುಖ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದಾಗ ಪೊಲೀಸರು ಜಲಫಿರಂಗಿ ಬಳಸಿ ಅವರನ್ನು ಚದುರಿಸಿದ್ದು 29 ಮಂದಿಯನ್ನು ಬಂಧಿಸಲಾಗಿದೆ.
ಕದನ ವಿರಾಮ ಒಪ್ಪಂದಕ್ಕೆ ಸರಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಸೋಮವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ `ಹಿಸ್ಟಾಡ್ರಟ್ ಕಾರ್ಮಿಕ ಸಂಘ'ದ ನಾಯಕ ಅರ್ನಾನ್ ಡೇವಿಡ್ ಕರೆ ನೀಡಿದ್ದರು. ಸೋಮವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 6 ಗಂಟೆಗೆ ಆರಂಭಗೊಂಡ ಮುಷ್ಕರಕ್ಕೆ ಹಲವು ಪ್ರಮುಖ ನಗರಗಳು ಕೈಜೋಡಿಸಿದ್ದು ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿತ್ತು ಮತ್ತು ಪುರಸಭೆಯ ಸೇವೆಗಳನ್ನು ಹಲವು ಗಂಟೆ ಸ್ಥಗಿತಗೊಳಿಸಲಾಯಿತು.
ಟೆಲ್‍ಅವೀವ್ ಬಳಿಯ ಬೆನ್ ಗ್ಯುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನೂ ಎರಡು ಗಂಟೆ ಸ್ಥಗಿತಗೊಳಿಸಲಾಗಿತ್ತು ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ವಕ್ತಾರರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಜೆರುಸಲೇಂ ಹಾಗೂ ಇತರ ಕೆಲವು ನಗರಗಳಲ್ಲಿ ಮುಷ್ಕರಕ್ಕೆ ಹೆಚ್ಚಿನ ಬೆಂಬಲ ದೊರಕಿಲ್ಲ. ಕೆಲವು ಖಾಸಗಿ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಿವೆ. ಟೆಲ್‍ಅವೀವ್‍ನಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಸಂಘದ ನಾಯಕ ಅರ್ನಾನ್ ಡೇವಿಡ್ ` ಒತ್ತೆಯಾಳುಗಳನ್ನು ನಡುನೀರಲ್ಲಿ ಕೈಬಿಡುವ ಧೋರಣೆಯನ್ನು ನಿಲ್ಲಿಸುವುದು' ತನ್ನ ಉದ್ದೇಶವಾಗಿದೆ ಎಂದರು.
ನಮ್ಮ ಮಧ್ಯಪ್ರವೇಶವು ಮಾತ್ರ ಅವರನ್ನು ನಡುಗಿಸಬಲ್ಲದು' ಎಂದು ಕದನ ವಿರಾಮ ಒಪ್ಪಂದವನ್ನು ವಿರೋಧಿಸುತ್ತಿರುವ ಇಸ್ರೇಲ್ ಸರಕಾರದ ಕೆಲವು ಪ್ರಭಾವಿ ಮುಖಂಡರನ್ನು ಪರೋಕ್ಷವಾಗಿ ಉಲ್ಲೇಖಿಸಿ ಡೇವಿಡ್ ಹೇಳಿದರು.
► ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ರಕ್ಷಣಾ ಸಚಿವರ ಆಗ್ರಹ
ಗಾಝಾದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸರಕಾರದ ಮೇಲೆ ಒತ್ತಡ ಹೆಚ್ಚುತ್ತಿದ್ದು ರಕ್ಷಣಾ ಸಚಿವರೂ ಈ ಆಗ್ರಹಕ್ಕೆ ಧ್ವನಿಗೂಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನೆತನ್ಯಾಹು ಅವರ ಕೆಲವು ನಿರ್ಧಾರಗಳನ್ನು ಆಕ್ಷೇಪಿಸಿದ್ದ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ತಕ್ಷಣವೇ ಕದನ ವಿರಾಮ ಜಾರಿಯಾಗಬೇಕೆಂದು ಕರೆ ನೀಡಿದ್ದಾರೆ. ಟೆಲ್ ಅವೀವ್‍ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿಪಕ್ಷ ಮುಖಂಡ ಮತ್ತು ಮಾಜಿ ಪ್ರಧಾನಿ ಯಾಯಿರ್ ಲ್ಯಾಪಿಡ್ ಜನರನ್ನು ಆಗ್ರಹಿಸಿದ್ದಾರೆ. ಗಾಝಾದಲ್ಲಿ ಒತ್ತೆಸೆರೆಯಲ್ಲಿ ಇರುವವರ ಕುಟುಂಬದವರ ಮನ ಒಲಿಸುವ ಸರಕಾರದ ಪ್ರಯತ್ನ ವಿಫಲವಾಗಿದ್ದು `ಗಾಝಾದಲ್ಲಿ ಬಂಧನದಲ್ಲಿ ಇರುವವರು ಸುರಕ್ಷಿತವಾಗಿ ವಾಪಸಾಗುವ ತನಕ ಪ್ರತಿಭಟನೆ ಮುಂದುವರಿಯಲಿದೆ ಎಂದು ಒತ್ತೆಯಾಳುಗಳ ಸಂಬಂಧಿಕರು ಹೇಳಿದ್ದಾರೆ.