ಗಾಝಾ, ಲೆಬನಾನ್, ಸಿರಿಯಾ ಮೇಲೆ ಇಸ್ರೇಲ್ ವ್ಯಾಪಕ ದಾಳಿ; 40 ಮಂದಿ ಮೃತ್ಯು

PC: x.com/redstreamnet
ಗಾಝಾ: ಕೇಂದ್ರೀಯ ಗಾಝಾ ಮೇಲೆ ಮಂಗಳವಾರ ನಸುಕಿನಲ್ಲಿ ಇಸ್ರೇಲ್ ನಡೆಸಿದ ಮಿಂಚಿನ ದಾಳಿಯಲ್ಲಿ ಕನಿಷ್ಠ 20 ಮಂದಿ ಜೀವ ಕಳೆದುಕೊಂಡಿದ್ದಾರೆ. ಸಿರಿಯಾ ಮತ್ತು ಲೆಬನಾನ್ ಮೇಲೆ ಕೂಡಾ ದಾಳಿ ನಡೆದಿರುವುದನ್ನು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದು, ಇಲ್ಲೂ ವ್ಯಾಪಕ ಜೀವಹಾನಿ ಆಗಿದೆ.
"ಗಾಝಾಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೂ ಹೆಚ್ಚಿದ್ದು, 70 ಮಂದಿ ಗಾಯಗೊಂಡಿದ್ದಾರೆ" ಎಂದು ಏಜೆನ್ಸಿ ವಕ್ತಾರ ಮೊಹ್ಮದ್ ಬಸಾಲ್ ಹೇಳಿದ್ದಾರೆ.
"ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಪದೇ ಪದೇ ನಿರಾಕರಿಸಿರುವ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ" ಎಂದು ಇಸ್ರೇಲ್ ಸಮರ್ಥಿಸಿಕೊಂಡಿದೆ. ದಾಳಿಯ ಹಿನ್ನೆಲೆಯಲ್ಲಿ ಗಾಝಾಪಟ್ಟಿ ಪ್ರದೇಶದಲ್ಲಿ ಎಲ್ಲ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.
ಸಿರಿಯಾ ಮತ್ತು ಲೆಬನಾನ್‍ನ ವಸತಿ ಪ್ರದೇಶಗಳ ಮೇಲೂ ದಾಳಿ ನಡೆದಿದ್ದು, ದಾರಾ ಪ್ರದೇಶದಲ್ಲಿ ಮೂರು ಮಂದಿ ಮೃತಪಟ್ಟು ನಾಲ್ವರು ಮಕ್ಕಳು, ಮಹಿಳೆ, ರಕ್ಷಣಾ ಕಾರ್ಯಕರ್ತರು ಸೇರಿದಂತೆ 19 ಮಂದಿ ಗಾಯಗೊಂಡಿದ್ದಾರೆ.