ದ್ವಿರಾಷ್ಟ್ರ ಸೂತ್ರಕ್ಕೆ ಇಸ್ರೇಲ್ ವಿರೋಧವು ಜಾಗತಿಕ ಶಾಂತಿಗೆ ಅಪಾಯ : ವಿಶ್ವಸಂಸ್ಥೆ ಎಚ್ಚರಿಕೆ

Update: 2024-01-24 16:57 GMT
Photo:PTI

ವಿಶ್ವಸಂಸ್ಥೆ : ಎರಡು ದೇಶ ಪರಿಹಾರ ಸೂತ್ರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಿರುವುದು ಈಗಾಗಲೇ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಪ್ರಮುಖ ಅಪಾಯವಾಗಿರುವ ಸಂಷರ್ಘವನ್ನು ಅನಿರ್ಧಿಷ್ಟಾವಧಿಗೆ ವಿಸ್ತರಿಸಲಿದೆ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಹುರಿದುಂಬಿಸಲಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಎಚ್ಚರಿಕೆ ನೀಡಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಚಿವ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಿದ ಗುಟೆರಸ್ ` ಸ್ವತಂತ್ರ ರಾಷ್ಟ್ರವನ್ನು ಸ್ಥಾಪಿಸುವ ಫೆಲೆಸ್ತೀನೀಯರ ಹಕ್ಕನ್ನು ಎಲ್ಲರೂ ಮಾನ್ಯ ಮಾಡಬೇಕು. ಗಾಝಾ ಸಂಘರ್ಷವು ಪ್ರಾದೇಶಿಕ ಸಂಘರ್ಷವಾಗಿ ಉಲ್ಬಣಿಸುವ ಅಪಾಯ ಈಗ ವಾಸ್ತವವಾಗುತ್ತಿದೆ. ಸಂಘರ್ಷ ಈಗ ಲೆಬನಾನ್, ಸಿರಿಯಾ, ಇರಾಕ್, ಕೆಂಪು ಸಮುದ್ರಕ್ಕೂ ವಿಸ್ತರಿಸುವ ಸಾಧ್ಯತೆ ಗೋಚರಿಸುತ್ತಿದೆ' ಎಂದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸೌದಿ ಅರೆಬಿಯಾದ ಸಹಾಯಕ ವಿದೇಶಾಂಗ ಸಚಿವ ವಲೀದ್ ಎಲ್ಖರೆಜಿ ` ಗಾಝಾದಲ್ಲಿ ತಕ್ಷಣ ಕದನ ವಿರಾಮ ಮತ್ತು ಶಾಂತಿ ಸ್ಥಾಪನೆಗೆ, ಫೆಲೆಸ್ತೀನಿಯನ್ ಜನತೆ ತಮ್ಮ ಘನತೆ ಮತ್ತು ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಲು ವಿಶ್ವಸಂಸ್ಥೆ ಅವಕಾಶ ಮಾಡಿಕೊಡಬೇಕು. ಗಾಝಾದಲ್ಲಿ ಅಸಹಾಯಕ ನಾಗರಿಕರ ಹತ್ಯಾಕಾಂಡ ಮತ್ತು ಸಾಮೂಹಿಕ ಶಿಕ್ಷೆಯನ್ನು ಇನ್ನೆಷ್ಟು ದಿನ ಮುಂದುವರಿಯಲು ಅವಕಾಶ ಮಾಡಿಕೊಡುತ್ತೀರಿ ?” ಎಂದು ಪ್ರಶ್ನಿಸಿದರು.

ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಗೆ ಮತ್ತು ಮಾನವೀಯ ನೆರವು ಪೂರೈಸಲು ಅವಕಾಶ ಮಾಡುವುದು ನಮ್ಮ ಪ್ರಥಮ ಆದ್ಯತೆಯಾಗಬೇಕಿದೆ. ಇದರಿಂದ ಜೀವರಕ್ಷಕ ನೆರವು ಅಗತ್ಯವಿದ್ದವರಿಗೆ ತಲುಪಬಹುದು ಮತ್ತು ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆ ಸಾಧ್ಯವಾಗಬಹುದು. ಗಾಝಾದಲ್ಲಿ ಕದನವಿರಾಮ ಜಾರಿಯಾಗಬೇಕೆಂದು ಬಹುತೇಕ ಅಂತರಾಷ್ಟ್ರೀಯ ಸಮುದಾಯ ಆಗ್ರಹಿಸಿದ್ದರೂ ಬೆರಳೆಣಿಕೆ ಸದಸ್ಯರ ನಿಲುವು ಇದಕ್ಕೆ ತಡೆಯಾಗಿದೆ ಎಂದು ಯುಎಇ ಪ್ರತಿನಿಧಿ ಆಗ್ರಹಿಸಿದರು.

ಫೆಲೆಸ್ತೀನ್ ದೇಶ ಸ್ಥಾಪನೆಯ ಜತೆಗೆ ಇಸ್ರೇಲ್ ಮತ್ತು ಇತರ ಪ್ರಾದೇಶಿಕ ದೇಶಗಳ ನಡುವಿನ ಸಂಬಂಧವನ್ನು ಸಾಮಾನ್ಯೀಕರಿಸುವ ಮಾರ್ಗವನ್ನು ಅನ್ವೇಷಿಸುವುದು ಅಮೆರಿಕದ ರಾಜತಾಂತ್ರಿಕತೆಯ ಪ್ರಮುಖ ಅಂಶವಾಗಿದೆ. ಫೆಲೆಸ್ತೀನೀಯರು ತಮ್ಮ ಸ್ವಂತ ರಾಷ್ಟ್ರವನ್ನು ಹೊಂದಿರುವ ಭವಿಷ್ಯದ ನಿರ್ಮಾಣ ನಮ್ಮ ಗುರಿಯಾಗಿದೆ' ಎಂದು ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ `ಕದನ ವಿರಾಮಕ್ಕೆ ಆಗ್ರಹಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ವೀಟೊ ಪ್ರಯೋಗಿಸುವುದು ಮತ್ತು ಇದೇ ಸಮಯದಲ್ಲಿ ಗಾಝಾದಲ್ಲಿ ಯುದ್ಧದ ತೀವ್ರತೆಯನ್ನು ಕಡಿಮೆಗೊಳಿಸಲು ಕರೆ ನೀಡುವುದು, ಇದು ಅಮೆರಿಕದ ರಾಜತಾಂತ್ರಿಕತೆಯಾಗಿದೆ. ಈ ದ್ವಿಮುಖ ಧೋರಣೆಯು ಗಾಝಾದಲ್ಲಿ ಫೆಲೆಸ್ತೀನೀಯರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಪ್ರಮುಖ ಕಾರಣವಾಗಿದೆ' ಎಂದು ಟೀಕಿಸಿದರು.

ಹಮಾಸ್ ಸಂಪೂರ್ಣ ನಿರ್ನಾಮಗೊಳಿಸುವ ಹೆಸರಲ್ಲಿ ಗಾಝಾ ಮತ್ತು ಪಶ್ಚಿಮದಂಡೆಯಲ್ಲಿ ಅಮಾಯಕ ನಾಗರಿಕರ ಹತ್ಯಾಕಾಂಡ ಮುಂದುವರಿಯಲು ಸಾಧ್ಯವಿಲ್ಲ. ಗಾಝಾದಲ್ಲಿನ ನರಹತ್ಯೆಯನ್ನು ತಡೆಯುವುದು ಈ ವಲಯದಲ್ಲಿನ ಭದ್ರತೆಗೆ ಮೂಲ ಅಗತ್ಯವಾಗಿದೆ' ಎಂದು ಇರಾನ್ನ ವಿದೇಶಾಂಗ ಸಚಿವ ಹುಸೇನ್ ಅಮೀರಬ್ದುಲ್ಲಹಿಯಾನ್ ಆಗ್ರಹಿಸಿದರು. 

ಇರಾನ್ ಸಚಿವರ ಉಪಸ್ಥಿತಿಗೆ ಇಸ್ರೇಲ್ ಆಕ್ಷೇಪ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಸಚಿವ ಮಟ್ಟದ ಸಭೆಯಲ್ಲಿ ಇರಾನ್ ನ ವಿದೇಶಾಂಗ ಸಚಿವರ ಉಪಸ್ಥಿತಿಗೆ ಇಸ್ರೇಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಇಸ್ರೇಲ್ ಪ್ರತಿನಿಧಿ ಗಿಲಾಡ್ ಎರ್ಡನ್ ` ಗಾಝಾದಲ್ಲಿನ ಸಂಘರ್ಷಕ್ಕೆ ಮೂಲ ಕಾರಣವಾಗಿರುವ ಇರಾನ್ ಅನ್ನು ತೊಲಗಿಸಬೇಕು' ಎಂದು ಭದ್ರತಾ ಮಂಡಳಿಯನ್ನು ಆಗ್ರಹಿಸಿದರು. ಹಮಾಸ್, ಲೆಬನಾನ್ನಲ್ಲಿ ಹಿಜ್ಬುಲ್ಲಾಗಳಿಗೆ, ಯೆಮನ್ನಲ್ಲಿ ಹೌದಿಗಳಿಗೆ ಇರಾನ್ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ. ಶೀಘ್ರದಲ್ಲೇ ಪರಮಾಣು ಶಸ್ತ್ರಾಸ್ತ್ರದ ಛತ್ರಿಯಡಿ ನಡೆಸಲಾಗುವುದು ಮತ್ತು ಇರಾನಿನ ಭಯೋತ್ಪಾದನೆ ನಿಮ್ಮೆಲ್ಲರನ್ನೂ ತಲುಪಲಿದೆ' ಎಂದರು

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News