ಯೆಮನ್ ಮೇಲೆ ಇಸ್ರೇಲ್‍ನ ಭೀಕರ ದಾಳಿ | 6 ಮಂದಿ ಮೃತ್ಯು

Update: 2024-12-27 15:27 GMT

ಸಾಂದರ್ಭಿಕ ಚಿತ್ರ | PC : PTI/AP

ಸನಾ : ಯೆಮನ್‍ನಲ್ಲಿ ಹೌದಿ ಬಂಡುಕೋರರ ನಿಯಂತ್ರಣದಲ್ಲಿರುವ ಸನಾ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕ ಟೆಡ್ರಾಸ್ ಅಧಾನೊಮ್ ಘೆಬ್ರೆಯೇಸಸ್ ಸ್ವಲ್ಪದರಲ್ಲೆ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಸನಾ ಸೇರಿದಂತೆ ಹಲವು ವಿಮಾನ ನಿಲ್ದಾಣಗಳ ಮೇಲೆ ನಡೆದ ದಾಳಿಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಸನಾ ವಿಮಾನ ನಿಲ್ದಾಣದಲ್ಲಿ ವಿಶ್ವಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಹೋದ್ಯೋಗಿಗಳೊಂದಿಗೆ ವಿಮಾನವನ್ನು ಹತ್ತಲು ಸಿದ್ಧವಾಗಿದ್ದಾಗ ಸಮೀಪದಲ್ಲೇ ಬಾಂಬ್ ದಾಳಿಯಾಗಿದ್ದು ವಿಮಾನದ ಸಿಬ್ಬಂದಿಯೊಬ್ಬ ಗಾಯಗೊಂಡಿದ್ದಾನೆ ಎಂದು ಘೆಬ್ರೆಯೇಸಸ್ ಹೇಳಿದ್ದಾರೆ.

ಯೆಮನ್ ರಾಜಧಾನಿ ಸನಾ ಮತ್ತು ಪಶ್ಚಿಮದ ಹೊದೈದಾ ನಗರದ ಮೇಲೆ ಗುರುವಾರ ಇಸ್ರೇಲ್ ನಡೆಸಿದ ಸರಣಿ ವೈಮಾನಿಕ ದಾಳಿಯಲ್ಲಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ಇರಾನ್ ಬೆಂಬಲಿತ ಹೌದಿ ಬಂಡುಕೋರರ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.

ಸನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೆಝ್‍ಯಾಜ್ ಮತ್ತು ರಾಸ್ ಕನಾತಿಬ್ ವಿದ್ಯುತ್ ಸ್ಥಾವರಗಳು ಸೇರಿದಂತೆ ಹೌದಿ ಬಂಡುಕೋರರು ತಮ್ಮ ಮಿಲಿಟರಿ ಚಟುವಟಿಕೆಗಳಿಗೆ ಬಳಸುತ್ತಿರುವ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಜತೆಗೆ ಯೆಮನ್‍ನ ಪಶ್ಚಿಮ ಕರಾವಳಿಯಲ್ಲಿರುವ ಹೊದೈದಾ, ಸಲಿಫ್ ಮತ್ತು ಕನಾತಿಬ್ ಬಂದರುಗಳ ಮೇಲೆಯೂ ದಾಳಿ ನಡೆಸಲಾಗಿದೆ.

ಇರಾನ್‍ನ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗೆ ಈ ಬಂದರುಗಳನ್ನು ಬಳಸಲಾಗುತ್ತಿತ್ತು ಎಂದು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಹೇಳಿದೆ. ಸನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 3 ಮಂದಿ ಮೃತಪಟ್ಟಿದ್ದು ಇತರ 30 ಮಂದಿ ಗಾಯಗೊಂಡಿರುವುದಾಗಿ ಹೌದಿ ಮೂಲಗಳು ಹೇಳಿವೆ.

ಇಸ್ರೇಲ್ ದಾಳಿಯಲ್ಲಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದು 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಕ್ರೂರ ಆಕ್ರಮಣಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ಎಚ್ಚರಿಕೆ ನೀಡಿದೆ. ಯೆಮನ್ ಮೇಲಿನ ದಾಳಿ ನಿಲ್ಲುವುದಿಲ್ಲ. ಇರಾನ್‍ನ ದುಷ್ಟಕೂಟದ ಈ ಬಂಡುಕೋರರ ತೋಳನ್ನು ಕತ್ತರಿಸಲು ನಾವು ಸಿದ್ಧವಾಗಿದ್ದೇವೆ. ನಮ್ಮ ಗುರಿ ಈಡೇರುವವರೆಗೆ ಇದನ್ನು ಮುಂದುವರಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಸನಾ ವಿಮಾನ ನಿಲ್ದಾಣದ ಮೇಲಿನ ದಾಳಿಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಖಂಡಿಸಿದ್ದಾರೆ. ಸನಾ ವಿಮಾನ ನಿಲ್ದಾಣ, ಕೆಂಪು ಸಮುದ್ರದ ಬಂದರುಗಳು ಮತ್ತು ಯೆಮನ್‍ನಲ್ಲಿನ ವಿದ್ಯುತ್ ಸ್ಥಾವರಗಳ ಮೇಲಿನ ಇಸ್ರೇಲ್ ದಾಳಿ ಆತಂಕಕಾರಿಯಾಗಿದೆ. ಅಂತರಾಷ್ಟ್ರೀಯ ಕಾನೂನನ್ನು ಗೌರವಿಸಬೇಕು ಮತ್ತು ನಾಗರಿಕರು ಹಾಗೂ ಮಾನವೀಯ ನೆರವು ಒದಗಿಸುವ ಕಾರ್ಯಕರ್ತರು ಯಾವತ್ತೂ ದಾಳಿಯ ಗುರಿಯಾಗಿರಬಾರದು' ಎಂದು ಗುಟೆರಸ್ ಆಗ್ರಹಿಸಿದ್ದಾರೆ.

►  ಸನಾ ವಿಮಾನ ನಿಲ್ದಾಣದಲ್ಲೇ ಬಾಕಿಯಾದ ಘೆಬ್ರೆಯೇಸಸ್

ಸನಾ ವಿಮಾನ ನಿಲ್ದಾಣದಿಂದ ನಮ್ಮ ವಿಮಾನವನ್ನು ಹತ್ತಲು ಸಿದ್ಧವಾಗುತ್ತಿದ್ದಂತೆಯೇ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆದಿದೆ. ನಮ್ಮ ವಿಮಾನದ ಒಬ್ಬ ಸಿಬ್ಬಂದಿ ಗಾಯಗೊಂಡಿದ್ದು ನಾವು ಇದ್ದ ಸ್ಥಳಕ್ಕಿಂತ ಕೆಲವೇ ಮೀಟರ್ ದೂರದಲ್ಲಿದ್ದ ವಾಯು ಸಂಚಾರ ನಿಯಂತ್ರಣ ಗೋಪುರ, ನಿರ್ಗಮನ ಕೊಠಡಿ ಮತ್ತು ರನ್‍ವೇ ಹಾನಿಗೊಂಡಿದೆ ಎಂದು ಘೆಬ್ರೆಯೇಸಸ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಮಾನ ನಿಲ್ದಾಣಕ್ಕೆ ಆದ ಹಾನಿಯನ್ನು ದುರಸ್ತಿಪಡಿಸುವ ತನಕ ನಾವು ಕಾಯಬೇಕಾಗಿದೆ. ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸಹೋದ್ಯೋಗಿಗಳು ಮತ್ತು ಹಾಗೂ ನಾನು ಸುರಕ್ಷಿತವಾಗಿದ್ದೇವೆ' ಎಂದವರು ಹೇಳಿದ್ದು ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಹೃತ್ಪೂರ್ವಕ ಸಂತಾಪ ಸಲ್ಲಿಸುವುದಾಗಿ ಪೋಸ್ಟ್ ಮಾಡಿದ್ದಾರೆ.

ಟೆಲ್‍ಅವೀವ್ ವಿಮಾನ ನಿಲ್ದಾಣದ

► ಮೇಲೆ ಹೌದಿಗಳ ಕ್ಷಿಪಣಿ ದಾಳಿ 

ಇಸ್ರೇಲ್‍ನ ವಾಣಿಜ್ಯ ಕೇಂದ್ರ ಟೆಲ್‍ಅವೀವ್‍ನ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ಮತ್ತು ಬೆನ್ ಗ್ಯುರಿಯೋನ್ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ಶುಕ್ರವಾರ ಹೇಳಿದೆ.

ಅರೇಬಿಯನ್ ಸಮುದ್ರದಲ್ಲಿದ್ದ ಹಡಗಿನ ಮೇಲೆಯೂ ಕ್ಷಿಪಣಿ ದಾಳಿ ನಡೆಸಲಾಗಿದೆ. ಸನಾ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಇದು ಪ್ರತೀಕಾರ ಕ್ರಮವಾಗಿದೆ ಎಂದು ಹೌದಿ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News