ಇದು ಹೀಗೆಯೇ ಮುಂದುವರಿಯುವಂತಿಲ್ಲ: ಇಸ್ರೇಲ್-ಫೆಲೆಸ್ತೀನಿ ಬಿಕ್ಕಟ್ಟು ಕುರಿತು ವಿಶ್ವಸಂಸ್ಥೆಯ ಪರಿಹಾರ ಮುಖ್ಯಸ್ಥ

Update: 2023-11-03 16:21 GMT

ಜಿನೆವಾ: ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳು ಮತ್ತು ತುರ್ತು ಪರಿಹಾರ ಸಂಯೋಜಕರ ಮಹಾ ಅಧೀನ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್ ಅವರು ಇಸ್ರೇಲ್-ಫೆಲೆಸ್ತೀನ್‌ಗೆ ಎರಡು ದಿನಗಳ ಭೇಟಿಯ ಬಳಿಕ ಹೊರಡಿಸಿರುವ ಹೇಳಿಕೆಯಲ್ಲಿ,ಅಲ್ಲಿಯ ಪರಿಸ್ಥಿತಿಯನ್ನು ‘ಜಾಗತಿಕ ಬಿಕ್ಕಟ್ಟು ’ಎಂದು ಬಣ್ಣಿಸಿದ್ದಾರೆ. ಇದು ಹೀಗೆಯೇ ಮುಂದುವರಿಯುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಯುದ್ಧದಲ್ಲಿ ತೊಡಗಿರುವ ದೇಶಗಳು ಕದನ ವಿರಾಮವನ್ನು ಒಪ್ಪಿಕೊಳ್ಳುವ ಅಗತ್ಯವಿದೆ. ಪ್ರಸಕ್ತ ಗಾಝಾಕ್ಕೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಇದೊಂದೇ ಕಾರ್ಯಸಾಧ್ಯ ಪರಿಹಾರವಾಗಿದೆ ಎಂದು ಹೇಳಿರುವ ಅವರು, ಯುದ್ಧದ ನಿಯಮಗಳನ್ನು ಗೌರವಿಸುವಂತಾಗಲು, ಸಂಘರ್ಷವನ್ನು ಶಮನಿಸಲು ಮತ್ತು ಅದರ ಹರಡುವಿಕೆಯನ್ನು ತಪ್ಪಿಸಲು ಪ್ರಭಾವಿ ದೇಶಗಳು ತಮ್ಮ ಪ್ರಭಾವವನ್ನು ಬಳಸುವುದು ಅಗತ್ಯವಾಗಿದೆ ಎಂದಿದ್ದಾರೆ.

ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇತ್ತೀಚಿನ ದಾಳಿಯಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿರುವುದು ವರದಿಯಾಗಿದೆ. ಮಾನವತೆಯ ಮೇಲೆ ಭಯಾನಕ ಪರಿಣಾಮಗಳು ಹೆಚ್ಚುತ್ತಿವೆ ಮತ್ತು ಹೋರಾಟವು ಇನ್ನಷ್ಟು ಭೀಕರ ಹಂತವನ್ನು ಪ್ರವೇಶಿಸಿದೆ. ಇಂತಹುದರಲ್ಲಿ ಇದು ಗಾಝಾದ ಜನರ ಮೇಲಿನ ಇತ್ತೀಚಿನ ದೌರ್ಜನ್ಯವಾಗಿದೆ ಎಂದಿರುವ ಅವರು,ಅ.7 ಮತ್ತು ಅದರ ನಂತರದ ಘಟನಾವಳಿಗಳು ಲಕ್ಷಾಂತರ ಜನರ ಬದುಕುಗಳಲ್ಲಿ ಆರದ ಗಾಯಗಳನ್ನುಂಟು ಮಾಡುತ್ತವೆ ಎಂದಿದ್ದಾರೆ.

ಸುಮಾರು 1,400 ಜನರ ಕ್ರೂರ ಹತ್ಯೆಯ ಬಳಿಕ ಇಸ್ರೇಲ್ ಆಘಾತಕ್ಕೊಳಗಾಗಿತ್ತು. 200ಕ್ಕೂ ಹೆಚ್ಚಿನ ಒತ್ತೆಯಾಳುಗಳ ಕುಟುಂಬಗಳು ತಮ್ಮ ಪ್ರೀತಿಪಾತ್ರರ ಭವಿಷ್ಯ,ಯೋಗಕ್ಷೇಮ ಮತ್ತು ಇರುವಿಕೆಯ ಕುರಿತು ಆತಂಕದಲ್ಲಿ ಬದುಕುತ್ತಿವೆ. ಗಾಝಾದಲ್ಲಿ ಮಹಿಳೆಯರು, ಮಕ್ಕಳು ಮತ್ತು ಪುರುಷರು ಹಸಿವಿನಿಂದ ನರಳುತ್ತಿದ್ದಾರೆ,ಆಘಾತಕ್ಕೊಳಗಾಗಿದ್ದಾರೆ ಮತ್ತು ಬಾಂಬ್ ದಾಳಿಗಳಲ್ಲಿ ಸಾಯುತ್ತಿದ್ದಾರೆ. ಅವರು ಮಾನವೀಯತೆಯ ಮೇಲಿನ ಎಲ್ಲ ನಂಬಿಕೆಗಳು ಮತ್ತು ಭವಿಷ್ಯದ ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಹತಾಶೆ ಎದ್ದುಕಾಣುತ್ತಿದೆ. ಪಶ್ಚಿಮ ದಂಡೆಯಲ್ಲಿ ಸಾವುಗಳು ಸಂಖ್ಯೆ ಹೆಚ್ಚುತ್ತಿದೆ. ಹಿಂಸಾಚಾರ ಮತ್ತು ಚೆಕ್‌ಪೋಸ್ಟ್‌ಗಳ ಮುಚ್ಚುವಿಕೆಯಿಂದಾಗಿ ಜನರಿಗೆ ಆಹಾರ, ಉದ್ಯೋಗಗಳು, ಆರೋಗ್ಯ ರಕ್ಷಣೆ ಮತ್ತು ಇತರ ಅಗತ್ಯ ಸೇವೆಗಳು ದುರ್ಲಭವಾಗಿವೆ. ಈ ನಡುವೆ ಜಗತ್ತು ಕ್ರಮವನ್ನು ತೆಗೆದುಕೊಳ್ಳಲು ಅಸಮರ್ಥವಾಗಿದೆ ಅಥವಾ ಇಷ್ಟವಿಲ್ಲ ಎಂಬಂತೆ ತೋರುತ್ತಿದೆ.

ಇದು ಹೀಗೆಯೇ ಮುಂದುವರಿಯುವಂತಿಲ್ಲ. ಒಂದು ಹಂತದ ಬದಲಾವಣೆ ನಮಗೆ ಅಗತ್ಯವಿದೆ. ಒತ್ತೆಯಾಳುಗಳನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆಗೊಳಿಸುವ ಅಗತ್ಯವಿದೆ. ಬದುಕುಳಿಯಲು ಅಗತ್ಯವಾದ ನೀರು, ಆಹಾರ, ಔಷಧಿಗಳು ಮತ್ತು ಇಂಧನದಂತಹ ಸಾಮಗ್ರಿಗಳನ್ನು ಸುರಕ್ಷಿತವಾಗಿ ಮತ್ತು ತಕ್ಷಣವೇ ಒದಗಿಸಲು ನಮಗೆ ಸಾಧ್ಯವಾಗಬೇಕಿದೆ. ಕಠಿಣ ಮಾತುಕತೆಗಳ ಬಳಿಕ ಅಗತ್ಯ ಸಾಮಗ್ರಿಗಳನ್ನು ಹೊತ್ತ 200ಕ್ಕೂ ಅಧಿಕ ಟ್ರಕ್‌ಗಳು ಗಾಜಾವನ್ನು ಪ್ರವೇಶಿಸಲು ಸಾಧ್ಯವಾಗಿದ್ದು ಕೊಂಚ ಪರಿಹಾರವನ್ನು ನೀಡಿದೆ,ಆದರೆ ಇದು ಅಗತ್ಯ ಪ್ರಮಾಣಕ್ಕೆ ಹತ್ತಿರವೂ ಇಲ್ಲ ಎಂದು ಗ್ರಿಫಿತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾಗರಿಕರ ಜೀವಗಳು ಮತ್ತು ಅವರ ಆಸ್ತಿಪಾಸ್ತಿಗಳನ್ನು ರಕ್ಷಿಸಲು ಮಿಲಿಟರಿ ಕಾರ್ಯಾಚರಣೆಗಳ ಮೇಲೆ ನಿರಂತರ ನಿಗಾ ಸೇರಿದಂತೆ ಜಾಗತಿಕ ಸಮುದಾಯವು ಅಂತರರಾಷ್ಟ್ರೀಯ ಕಾನೂನಿನಡಿ ತನ್ನ ಬಾಧ್ಯತೆಗಳನ್ನು ಗೌರವಿಸುವ ಅಗತ್ಯವಿದೆ. ಈಗ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲಗೊಂಡರೆ ಪರಿಣಾಮಗಳು ಈ ಪ್ರದೇಶವನ್ನು ಮೀರುತ್ತವೆ,ಏಕೆಂದರೆ ಇದು ಜಾಗತಿಕ ಬಿಕ್ಕಟ್ಟು ಆಗಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News